ಹೈದರಾಬಾದ್: ಟೀಂ ಇಂಡಿಯಾದ ಅನುಭವಿ ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಅವರ ಮಾಜಿ ಪತ್ನಿ ಹಸಿನ್ ಜಹಾನ್ ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಶಮಿ ತಮ್ಮ ಮಗಳನ್ನು ಭೇಟಿ ಮಾಡಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಹಳ ದಿನಗಳ ನಂತರ ಮಗಳನ್ನು ಭೇಟಿಯಾದ ಶಮಿ ಭಾವುಕರಾಗಿದ್ದರು. ಆದ್ರೆ ಈ ಬಗ್ಗೆ ಮಾಜಿ ಪತ್ನಿ ಪ್ರತಿಕ್ರಿಯಿಸಿದ್ದು, ಶಮಿ ಶೋ ಆಫ್ಗಾಗಿ ಮಗಳನ್ನು ಭೇಟಿಯಾಗಿದ್ದಾರೆ. ಅವರು ಮಗಳ ಮೇಲೆ ಸುಳ್ಳು ಪ್ರೀತಿ ತೋರಿಸಿದ್ದಾರೆ ಎಂದಿದ್ದಾರೆ.
"ಮಗಳು ಇರಾ ಮೇಲೆ ಶಮಿಗೆ ಕಿಂಚಿತ್ತೂ ಕಾಳಜಿ ಇಲ್ಲ. ಆಕೆ ಗಿಟಾರ್ ಮತ್ತು ಕ್ಯಾಮೆರಾವನ್ನು ಖರೀದಿಸಿಕೊಡುವಂತೆ ಕೇಳಿದ್ದಳು. ಆದರೆ ಶಮಿ ಅದನ್ನು ಖರೀದಿಸಿ ಕೊಡಲೇ ಇಲ್ಲ. ಕೇವಲ ಜನರೆದುರು ಶೋಗಾಗಿ ಭೇಟಿಯಾಗಿದ್ದಾರೆ. ಮಗಳ ಪಾಸ್‌ಪೋರ್ಟ್ ಅವಧಿ ಮುಗಿದಿದೆ. ಹೊಸ ಪಾಸ್‌ಪೋರ್ಟ್‌ಗೆ ಶಮಿ ಸಹಿ ಅಗತ್ಯ. ಅದಕ್ಕಾಗಿಯೇ ಇರಾ ತನ್ನ ತಂದೆಯನ್ನು ಭೇಟಿಯಾಗಿದ್ದಾಳೆ. ಆದರೆ, ಶಮಿ ಪಾಸ್‌ಪೋರ್ಟ್‌ಗೂ ಸಹಿ ಹಾಕಲಿಲ್ಲ. ಅಲ್ಲದೇ ಆಕೆಯನ್ನು ಶಾಪಿಂಗ್ ಮಾಲ್ಗೆ ಕರೆದೊಯ್ದು ಅಲ್ಲಿ ತಾನು ಒಪ್ಪಂದ ಮಾಡಿಕೊಂಡಿರುವ ಕಂಪನಿಯ ಶೂ ಮತ್ತು ಬಟ್ಟೆಗಳನ್ನು ಕೊಡಿಸಿದ್ದಾರೆ" ಎಂದು ಹೇಳಿದ್ದಾರೆ.
"ಆ ಕಂಪನಿಯ ಯಾವುದೇ ವಸ್ತುಗಳನ್ನು ಖರೀದಿಸಲು ಶಮಿ ಹಣ ಪಾವತಿಸಬೇಕಾಗಿಲ್ಲ. ಅದಕ್ಕಾಗಿ ಆ ಮಾಲ್ಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅವಳು ಬಯಸಿದ ಗಿಟಾರ್ ಮತ್ತು ಕ್ಯಾಮೆರಾವನ್ನು ಮಾತ್ರ ಖರೀದಿಸಿಕೊಡಲಿಲ್ಲ. ಒಂದು ತಿಂಗಳ ಹಿಂದೆಯೂ ಕೂಡ ಮಗಳು ಶಮಿಯನ್ನು ಭೇಟಿಯಾಗಿದ್ದಳು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದೇ ಒಂದೂ ಪೋಸ್ಟ್ ಕೂಡ ಶಮಿ ಹಂಚಿಕೊಂಡಿಲ್ಲ. ಇದೀಗ ಪೋಸ್ಟ್ ಮಾಡಿರಲು ಕಾರಣಗಳೇನು?" ಎಂದು ಹಸಿನ್ ಜಹಾನ್ ಕಿಡಿಕಾರಿದ್ದಾರೆ.
A father meeting his daughter after 6 years is a very joyous and loving gesture. Cricketer Mohammed Shami shopping with his daughter. pic.twitter.com/SYSzU3JlT5
— विकास सैनी✍️🇮🇳🐦 (@vikaskikalam) October 3, 2024
ಇತ್ತೀಚೆಗಷ್ಟೇ ಶಮಿ ಮಗಳೊಂದಿಗೆ ಕಳೆದ ಸಂತಸದ ಕ್ಷಣಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದರು. "ಬಹಳ ದಿನಗಳ ಬಳಿಕ ಮತ್ತೆ ನಿನ್ನನ್ನು ನೋಡಿದೆ. ಆ ಕ್ಷಣದಲ್ಲಿ ಸಮಯ ನಿಂತಂತೆ ಭಾಸವಾಗಿತ್ತು. ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ ಬೇಬೋ' ಎಂದು ವಿಡಿಯೋಗೆ ಅಡಿಬರಹ ಬರೆದು ಪೋಸ್ಟ್ ಮಾಡಿದ್ದರು.
ಮೊಹಮ್ಮದ್ ಶಮಿ ಮತ್ತು ಹಸಿನ್ ಜಹಾನ್ 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ದಂಪತಿಗೆ 2015ರಲ್ಲಿ ಇರಾ ಜನಿಸಿದ್ದಳು. ಆ ಬಳಿಕ ಶಮಿ ಹಾಗೂ ಜಹಾನ್ ನಡುವೆ ಬಿನ್ನಾಭಿಪ್ರಾಯ ಉಂಟಾಗಿ 2018ರಲ್ಲಿ ಶಮಿ ವಿರುದ್ಧ ಜಹಾನ್ ಅವರು ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಸದ್ಯ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ: ಮಹಿಳಾ ಟಿ20 ವಿಶ್ವಕಪ್: ಇಂದು ಸಂಜೆ ಭಾರತ-ನ್ಯೂಜಿಲೆಂಡ್ ಪಂದ್ಯ - India vs New Zealand Match