Ind vs Aus, 4th Test: ಬಾರ್ಡರ್-ಗವಾಸ್ಕರ್ ಟ್ರೋಫಿ ಭಾಗವಾಗಿ ಆಸ್ಟ್ರೇಲಿಯಾ ಮತ್ತು ಭಾರತ ಕ್ರಿಕೆಟ್ ತಂಡಗಳ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯ 4ನೇ ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿರುವ ಆಸ್ಟ್ರೇಲಿಯಾ ಬೃಹತ್ ಮೊತ್ತ ಪೇರಿಸಿದೆ. ಸ್ಯಾಮ್ ಕಾನ್ಸ್ಟಾಸ್ (60), ಉಸ್ಮಾನ್ ಖವಾಜಾ (57), ಲಬುಶೇನೆ (72) ಅರ್ಧಶತಕ ಮತ್ತು ಸ್ಟೀವ್ ಸ್ಮಿತ್ (140) ಶತಕದ ನೆರವಿನಿಂದ ಆಸೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 474 ರನ್ಗಳನ್ನು ಕಲೆಹಾಕಿದೆ. ಇದಕ್ಕುತ್ತರವಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 164 ರನ್ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದೆ. ಸದ್ಯ ಪಂದ್ಯದ ಮೇಲೆ ಕಾಂಗಾರೂ ಪಡೆ ಹಿಡಿತ ಸಾಧಿಸಿದೆ.
ಏತನ್ಮಧ್ಯೆ, ಭಾರತದ ಮಾಜಿ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಟೀಂ ಇಂಡಿಯಾದ ಸ್ಟಾರ್ ಆಟಗಾರನ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಬೌಲಿಂಗ್ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಮೊಹಮ್ಮದ್ ಸಿರಾಜ್ ಅವರನ್ನು ತಂಡದಿಂದ ಕೈಬಿಡುವಂತೆ ಹೇಳಿದ್ದಾರೆ.
ಮೊಹಮ್ಮದ್ ಸಿರಾಜ್ ಕಳಪೆ ಪ್ರದರ್ಶನ: 2021ರ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿರಾಜ್‌ಗೆ ಪ್ರಸ್ತುತ ನಡೆಯುತ್ತಿರುವ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಈವರೆಗಿನ 7 ಇನ್ನಿಂಗ್ಸ್‌ನಲ್ಲಿ ಕೇವಲ 13 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ಅವರು ಪಡೆದಿರುವ ವಿಕೆಟ್ಗಳ ಪೈಕಿ ಹೆಚ್ಚಿನವು ಬೌಲರ್ಗಳದ್ದೇ ಆಗಿವೆ ಎಂಬುದನ್ನು ಗಮನಿಸಬೇಕು. ಇದಷ್ಟೇ ಅಲ್ಲದೇ, ಹೊಸ ಬಾಲ್ನೊಂದಿಗೂ ಹೇಳಿಕೊಳ್ಳುವ ಪ್ರದರ್ಶನ ನೀಡಲು ಸಿರಾಜ್‌ಗೆ ಆಗುತ್ತಿಲ್ಲ. ಇದರಿಂದಾಗಿ ಬುಮ್ರಾ ಮೇಲೆ ಒತ್ತಡ ಹೆಚ್ಚುತ್ತಿದೆ.
ಚಾಟಿ ಬೀಸಿದ ಗವಾಸ್ಕರ್: ಸಿರಾಜ್ ಅವರ ಕಳಪೆ ಫಾರ್ಮ್ ಬಗ್ಗೆ ಪ್ರತಿಕ್ರಿಯಿಸಿರುವ ಗವಾಸ್ಕರ್, "ಸಿರಾಜ್‌ಗೆ ತಂಡದಿಂದ ಬ್ರೇಕ್ ನೀಡಬೇಕು. ಇದರರ್ಥ ಅವರಿಗೆ ವಿಶ್ರಾಂತಿ ನೀಡಿ ಎಂದಲ್ಲ. ವಿಶ್ರಾಂತಿ ನೀಡುತ್ತೇವೆ ಎನ್ನುವ ಬದಲು ಕಳಪೆ ಪ್ರದರ್ಶನಕ್ಕಾಗಿ ತಂಡದಿಂದ ಕೈಬಿಡಲಾಗುತ್ತಿದೆ ಎಂದೇ ಅವರಿಗೆ ಸ್ಪಷ್ಟವಾಗಿ ಹೇಳಬೇಕು. ಕೆಲವೊಮ್ಮೆ ಆಟಗಾರರೊಂದಿಗೆ ಒರಟಾಗಿ ವರ್ತಿಸುವುದರಲ್ಲಿ ತಪ್ಪೇನಿಲ್ಲ. ಏಕೆಂದರೆ ನೀವು ವಿಶ್ರಾಂತಿ ತೆಗೆದುಕೊಳ್ಳಿ ಎಂದು ಹೇಳಿದರೆ ಅವರು ಬೇರೇ ರೀತಿಯಲ್ಲೇ ಕಲ್ಪಿಸಿಕೊಳ್ಳುತ್ತಾರೆ. ಅಲ್ಲದೇ ಸಿರಾಜ್ ಅವರ ಸ್ಥಾನಕ್ಕೆ ಪ್ರಸಿದ್ಧ ಕೃಷ್ಣ ಅಥವಾ ಹರ್ಷಿತ್ ರಾಣಾ ಅವರಿಗೆ ಅವಕಾಶ ಕೊಡಿ. ಆಗ ಅವರು ಬುಮ್ರಾಗೆ ಸಹಾಯಕವಾಗುತ್ತಾರೆ ಎಂದು ತಿಳಿಸಿದ್ದಾರೆ.
ಮೆಲ್ಬೋರ್ನ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ, ಸಿರಾಜ್ 23 ಓವರ್‌ಗಳನ್ನು ಬೌಲ್ ಮಾಡಿ 5.30 ಎಕಾನಮಿಯಲ್ಲಿ 122 ರನ್ ಬಿಟ್ಟುಕೊಟ್ಟಿದ್ದಾರೆ. ಅಲ್ಲದೇ ಒಂದೇ ಒಂದು ವಿಕೆಟ್ ಪಡೆಯಲು ಅವರಿಗೆ ಸಾಧ್ಯವಾಗಿಲ್ಲ.
ಇದನ್ನೂ ಓದಿ: ದೀಪ್ತಿ ಶರ್ಮಾ ಆಲ್ರೌಂಡರ್ ಪ್ರದರ್ಶನಕ್ಕೆ ಬೆಚ್ಚಿದ ವಿಂಡೀಸ್: ಭಾರತಕ್ಕೆ 5 ವಿಕೆಟ್ಗಳ ಗೆಲುವು, ಸರಣಿ ಕ್ಲೀನ್ ಸ್ವೀಪ್