ಬೆಂಗಳೂರು: ಮಾದಕವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯಡಿ (ಎನ್‌ಡಿಪಿಎಸ್) ದಾಳಿ ನಡೆಸುವಾಗ ಹಾಗೂ ಶಂಕಿತರ ಬಂಧನದ ವೇಳೆ ಪೊಲೀಸರ ವಿರುದ್ಧವೇ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಗಟ್ಟಲು ರಾಜ್ಯ ಪೊಲೀಸ್ ಇಲಾಖೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ.
ಡ್ರಗ್ಸ್ ಪ್ರಕರಣದಲ್ಲಿ ದಾಳಿಗೂ ಮುನ್ನ, ದಾಳಿ ವೇಳೆ ಹಾಗೂ ದಾಳಿ ನಂತರ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ರಾಜ್ಯ ಪೊಲೀಸ್ ಇಲಾಖೆಯ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್ ಮಾರ್ಗಸೂಚಿ ಹೊರಡಿಸಿದ್ದಾರೆ.
ಮಾದಕವಸ್ತು ಜಪ್ತಿಯಾದ 48 ಗಂಟೆಯೊಳಗೆ ನ್ಯಾಯಾಲಯಕ್ಕೆ ಪಂಚನಾಮೆ ವರದಿ ಸಲ್ಲಿಸಬೇಕು. ಇದರಲ್ಲಿ ಫೋಟೋ ಹಾಗೂ ವಿಡಿಯೋಗ್ರಾಫಿ ಕಡ್ಡಾಯವಾಗಿ ನಮೂದಿಸಬೇಕೆಂದು ಹೇಳಿದೆ.
ಬೆಂಗಳೂರು ಮಾತ್ರವಲ್ಲದೇ ರಾಜ್ಯದಲ್ಲಿ ಆಫ್ರಿಕಾ ಮೂಲದ ಪ್ರಜೆಗಳು ನಿರಂತರವಾಗಿ ಡ್ರಗ್ಸ್ ದಂಧೆಯಲ್ಲಿ ನಿರತರಾಗಿದ್ದಾರೆ. ಮಾಹಿತಿ ಪ್ರಕಾರ, ವರ್ಷಕ್ಕೆ ಎನ್‌ಡಿಪಿಎಸ್ ಕಾಯ್ದೆಯಡಿ 1 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಅವ್ಯಾಹತವಾಗಿ ದಂಧೆಯಲ್ಲಿ ತೊಡಗಿರುವ ಜಾಲ ವ್ಯಾಪಕವಾಗಿದ್ದು, ಇವರನ್ನು ಮಟ್ಟಹಾಕಲು ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಲಾಗಿದೆ.
ದಾಳಿ ಪೂರ್ವದಲ್ಲಿ ಏನು ಮಾಡಬೇಕು?:
- ಘಟನಾ ಸ್ಥಳಕ್ಕೆ ತೆರಳುವ ಮುನ್ನ ಡೈರಿಯಲ್ಲಿ ಅನುಮತಿ ಪಡೆದಿರುವ ಬಗ್ಗೆ ದಾಳಿ ಮಾಡಲು ಶೋಧನಾ ವಾರೆಂಟ್ ಪಡೆದಿದ್ದರೆ ಅಥವಾ ಪಡೆಯದಿದ್ದರ ಬಗ್ಗೆ ನಮೂದಿಸಬೇಕು.
- ದಾಳಿ ಮಾಡಿದ ಅಧಿಕಾರಿ ಅಧಿಕೃತವಾಗಿ ರಿವಾಲ್ವರ್ ಇಟ್ಟುಕೊಂಡಿರಬೇಕು.
- ಮಾಹಿತಿ ದೊರೆತ 72 ಗಂಟೆಗಳ ಒಳಗಾಗಿ ಲಿಖಿತ ರೂಪದಲ್ಲಿ ಮಾಹಿತಿ ನೀಡಿ ಮೇಲಾಧಿಕಾರಿಗಳಿಂದ ಅನುಮತಿ ಪಡೆಯಬೇಕು.
- ಶೋಧ ನಡೆಸಬೇಕಾದ ಸ್ಥಳ, ಯಾವ ರೀತಿ ಮಾಹಿತಿ ಸಿಕ್ಕಿದೆ ಎಂಬುದೂ ಒಳಗೊಂಡಂತೆ ಪೂರ್ಣ ವಿವರವನ್ನು ಡೈರಿಯಲ್ಲಿ ನಮೂದಿಸಬೇಕು.
ದಾಳಿ ವೇಳೆ ಪೊಲೀಸರು ಮಾಡಬೇಕಿರುವುದೇನು?:
- ಸರ್ಚ್ ವಾರೆಂಟ್ ತೋರಿಸಿ ದಾಳಿ ಮಾಡಬೇಕು.
- ದಾಳಿ ವೇಳೆ ತಮ್ಮ ಬಳಿ ಮಾದಕವಸ್ತುಗಳು ಇಲ್ಲವೆಂಬುದನ್ನು ಅಧಿಕಾರಿ ಹಾಗೂ ಸಿಬ್ಬಂದಿ ಖಚಿತಪಡಿಸಿಕೊಳ್ಳಬೇಕು.
- ದಾಳಿ ಆರಂಭದಿಂದ ಮಹಜರು ಪ್ರಕ್ರಿಯೆಯನ್ನು ಮುಗಿಸಿ ಮಹಜರು ಸಾಕ್ಷಿದಾರರ ಸಹಿ ಪಡೆಯುವವರೆಗೂ ಆಡಿಯೋ-ವಿಡಿಯೋ ಮಾಡುವುದು ಕಡ್ಡಾಯ.
- ಆರೋಪಿಗಳ ಮೊಬೈಲ್ನಲ್ಲಿರುವ ಡೇಟಾ ಹಾಗೂ ಇತರೆ ಸಾಕ್ಷ್ಯಗಳ ಪರಿಶೀಲನೆ
ದಾಳಿ ನಂತರ ಮಾಡಬೇಕಾಗಿರುವುದು ಏನು?:
- ಶೋಧ ಕಾರ್ಯ ಮುಗಿದ ಬಳಿದ ದಾಳಿ ಸಂಪೂರ್ಣ ಪ್ರಕ್ರಿಯೆಯನ್ನು ಸಂಬಂಧಿಸಿದ ಪೊಲೀಸ್ ಅಧೀಕ್ಷಕರಿಗೆ 48 ಗಂಟೆಯೊಳಗೆ ವರದಿ ಮಾಡಬೇಕು
- ನ್ಯಾಯಾಲಯದ ಆದೇಶದವರೆಗೆ ಠಾಣಾಧಿಕಾರಿಯೇ ಜಪ್ತಿಯಾದ ವಸ್ತುಗಳನ್ನು ರಕ್ಷಿಸಬೇಕು.
- ಪರಿಶೀಲನೆ ಮುಕ್ತಾಯ ಬಳಿಕ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು.
ಎಷ್ಟೋ ವೇಳೆ ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸದೆ ತಮ್ಮ ಕಸ್ಟಡಿಯಲ್ಲಿ ಇಟ್ಟುಕೊಳ್ಳುವುದು, ಜಪ್ತಿ ಮಾಡಲಾದ ಮಾದಕವಸ್ತುಗಳನ್ನು ನ್ಯಾಯಾಲಯಕ್ಕೆ ತಿಳಿಸದೆ ದುರ್ಬಳಕೆ ಹಾಗೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ಬಂಧಿಸದೆ ಬಿಟ್ಟು ಕಳುಹಿಸುವುದನ್ನು ತಡೆಯಲು ಈ ಮಾರ್ಗಸೂಚಿಗಳು ನೆರವಿಗೆ ಬರಲಿದೆ.
ಇದನ್ನೂ ಓದಿ: 'ನಶೆ ಮುಕ್ತ ಕರ್ನಾಟಕ' ಆ್ಯಪ್ ಆರಂಭ: ಡ್ರಗ್ಸ್ ಕೇಸ್ ಬಗ್ಗೆ ಪೊಲೀಸರಿಗೆ ನೀವೂ ಮಾಹಿತಿ ನೀಡಬಹುದು