ದೇವನಹಳ್ಳಿ: ಬೈಕ್ ವ್ಹೀಲಿಂಗ್ ಮಾಡುವ ವೇಳೆ ಎದುರಗಡೆಯಿಂದ ಬರುತ್ತಿದ್ದ ಕ್ಯಾಂಟರ್ಗೆ ಡಿಕ್ಕಿ ಹೊಡೆದು ಯುವಕರಿಬ್ಬರು ಮೃತಪಟ್ಟ ಘಟನೆ ದೇವನಹಳ್ಳಿಯ ವಿಜಯಪುರ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ವಿಜಯಪುರ ಪಟ್ಟಣದ ಮನೋಜ್ (19) ಮತ್ತು ಹರ್ಭಾಜ್ (19) ಮೃತರು.
ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಇಂದು ಬೆಳಗ್ಗೆ ಮಳೆಯ ನಡುವೆ ಇಬ್ಬರು ದ್ವಿಚಕ್ರ ವಾಹನದಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದರು. ಈ ವೇಳೆ ಎದುರುಗಡೆ ಬರುತ್ತಿದ್ದ ಕ್ಯಾಂಟರ್ಗೆ ಡಿಕ್ಕಿ ಹೊಡೆದು ತೀವ್ರ ರಕ್ತಸ್ರಾವವಾಗಿ ಇಬ್ಬರೂ ಮೃತಪಟ್ಟಿದ್ದಾರೆ.
ಅಪಘಾತ ತಪ್ಪಿಸಲು ಪ್ರಯತ್ನಿಸಿದ ಕ್ಯಾಂಟರ್ ಚಾಲಕ, ತಕ್ಷಣ ಕ್ಯಾಂಟರ್ ಅನ್ನು ರಸ್ತೆ ಬದಿಗೆ ಎಳೆದಿದ್ದಾರೆ. ಅದೃಷ್ಟವಶಾತ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯದೇ ಸ್ವಲ್ಪದರಲ್ಲೇ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು. ಬಳಿಕ ಮೃತದೇಹಗಳನ್ನು ದೇವನಹಳ್ಳಿಯ ಆಕಾಶ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಸಾಗಿಸಿದರು.
ಪಟ್ಟಣದ ಜನಸಂದಣಿಯ ರಸ್ತೆ ಹಾಗೂ ಬೈಪಾಸ್ನಲ್ಲಿ ದಿನನಿತ್ಯ ಬೈಕ್ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಪೊಲೀಸರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪುರಸಭೆಯವರು ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದರೂ ಕ್ಯಾಮರಾಗಳಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ಆಧರಿಸಿ, ಕಾನೂನು ಕ್ರಮ ಕೈಗೊಂಡಿದ್ದರೆ ಪ್ರಾಣಾಪಾಯ ಸಂಭವಿಸುವ ಹಂತಕ್ಕೆ ಹೋಗುತ್ತಿರಲಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.