ದಾವಣಗೆರೆ: ಜಿಲ್ಲೆಯಲ್ಲಿ 4-5 ದಿನಗಳಿಂದ ಧಾರಾಕಾರ ಮಳೆಯಾಗಿದೆ. ಈ ಮಳೆಯಿಂದಾಗಿ ಕೆರೆ-ಕಟ್ಟೆಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದು ರೈತರ ಸಂತೋಷಕ್ಕೆ ಕಾರಣವಾಗಿದ್ದರೆ, ಇನ್ನೊಂದೆಡೆ ಬೆಳೆ ಹಾನಿ ಸಂಭವಿಸಿ ಅಪಾರ ನಷ್ಟವನ್ನುಂಟು ಮಾಡುತ್ತಿದೆ.
ಈ ಮಧ್ಯೆಯೇ ಹರಿಹರ ತಾಲೂಕಿನ ದೇವರಬೆಳಕೆರೆ ಪಿಕ್ ಅಪ್ ಡ್ಯಾಂ ತಡೆಗೋಡೆ ಬಿರುಕು ಬಿಟ್ಟಿದ್ದು, ರೈತರಲ್ಲಿ ಆತಂಕ ದ್ವಿಗುಣಗೊಳಿಸಿದೆ. ಡ್ಯಾಂಗೆ ನೀರಿನ ಹರಿವು ಹೆಚ್ಚಾದ ಕಾರಣ ತಡೆಗೋಡೆ ಬಿರುಕು ಬಿಟ್ಟಿದೆ ಎನ್ನಲಾಗಿದೆ.
ಪಿಕಪ್ ಡ್ಯಾಂಗೆ ಹಾನಿ ಉಂಟಾಗದಿರಲು ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ. ಇದರಿಂದ ನೀರು ಅಕ್ಕಪಕ್ಕದ ಜಮೀನುಗಳಿಗೆ ನುಗ್ಗುತ್ತಿದ್ದು, ಬೆಳೆ ಹಾನಿಯಾಗುತ್ತಿದೆ.
ಡ್ಯಾಂ ತಡೆಗೋಡೆ ಬಿರುಕು ಬಿಟ್ಟ ವಿಚಾರ ತಿಳಿದ ಶಾಸಕ ಎಸ್.ರಾಮಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಡ್ಯಾಂಗೆ ಹಾನಿ ಉಂಟಾಗದಿರಲು ಬಿರುಕು ಬಿಟ್ಟ ಜಾಗವನ್ನು ತಮ್ಮ ಸ್ವಂತಃ ಖರ್ಚಿನಲ್ಲಿ ದುರಸ್ತಿ ಮಾಡಿಸುತ್ತಿದ್ದಾರೆ.