ಬೆಂಗಳೂರು: ಪೋಲಿ ಅಲಿಯುವುದನ್ನು ಬಿಡುವಂತೆ ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸುಂಕದಕಟ್ಟೆಯ ಶ್ರೀನಿವಾಸ ನಗರದ ಪೈಪ್‌ಲೈನ್ ರಸ್ತೆಯ ನಿವಾಸಿ ಸಂಜಯ್ (22) ಮೃತ ಯುವಕ ಎಂದು ಪೊಲೀಸರು ತಿಳಿಸಿದ್ದಾರೆ.
ಪಿಯುಸಿಗೆ ವಿದ್ಯಾಭ್ಯಾಸ ಬಿಟ್ಟ ಸಂಜಯ್, ಸ್ನೇಹಿತರ ಜೊತೆಗೂಡಿ ಅಲಿಯುತ್ತಿದ್ದ. ಕಳೆದ ಮೂರು ದಿನಗಳಿಂದ ಮನೆಗೂ ಬಾರದೇ ಸ್ನೇಹ ಕೂಟ ಕಟ್ಟಿಕೊಂಡು ಅಲೆದಾಡುತ್ತಿದ್ದ. ಶನಿವಾರ ಮನೆಗೆ ಮರಳಿ ಬಂದಿದ್ದ. ಇದರಿಂದ ಕೋಪಗೊಂಡ ತಂದೆತಾಯಿ ಹಾಗೂ ಸಂಬಂಧಿಕರು ಸಂಜಯ್‌ಗೆ ಬೈದು ಬುದ್ಧಿ ಹೇಳಿದ್ದರು. ಬಳಿಕ ಸಂಜಯ್ ಮನನೊಂದು ಕೊಠಡಿಗೆ ತೆರಳಿ ಬಾಗಿಲು ಹಾಕಿಕೊಂಡು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವೃದ್ಧ ಆತ್ಮಹತ್ಯೆ: ಇನ್ನೊಂದು ಪ್ರಕರಣದಲ್ಲಿ ಕ್ಷುಲಕ್ಕ ಕಾರಣಕ್ಕೆ ಮನನೊಂದು ವೃದ್ಧನೋರ್ವ ತಮ್ಮ ಮನೆಯ ಮುಂದೆ ಇರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೀವನಭೀಮ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜೀವನಭೀಮಾನಗರದ ಕೋದಂಡರಾಮ ವೆಂಕಟ (70) ಆತ್ಮಹತ್ಯೆ ಮಾಡಿಕೊಂಡ ವೃದ್ಧ.
ಕೋದಂಡರಾಮ ವೆಂಕಟ ಅವರು ಪುತ್ರ ಹಾಗೂ ಸೊಸೆಯ ಜತೆಗೆ ಜೀವನಭೀಮಾನಗರದಲ್ಲಿ ವಾಸಿಸುತ್ತಿದ್ದರು. ಪುತ್ರ ಮತ್ತು ಸೊಸೆ ಇಬ್ಬರು ಕೋದಂಡರಾಮ ಅವರ ಬಳಿ ಮಕ್ಕಳನ್ನು ಬಿಟ್ಟು ಬೇರೆ ಊರಿಗೆ ತೆರಳಿದ್ದರು. ಈ ವೇಳೆ, ಶನಿವಾರ ಮಧ್ಯರಾತ್ರಿ ಹೊರಬಂದ ವೃದ್ಧ ಮನೆಯ ಮುಂದಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
(ಇದನ್ನೂ ಓದಿ: ನಾನು ಅಪ್ಪು ಹುಡುಕಿಕೊಂಡು ಹೋಗುತ್ತೇನೆ, ಇಲ್ಲಿರೋದಕ್ಕೆ ಆಗಲ್ಲ ಎಂದು ಭಾವುಕರಾದ ರಾಘಣ್ಣ; ಗಳಗಳನೆ ಅತ್ತ ಶಿವಣ್ಣ)