ಬೆಂಗಳೂರು: ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರಗಳ ಕುರಿತು ರಾಜ್ಯ ಕಾಂಗ್ರೆಸ್ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಟ್ವೀಟ್ ಮೂಲಕ ತನ್ನ ಬೇಸರ ಹೊರಹಾಕಿರುವ ಕಾಂಗ್ರೆಸ್, ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆ, ದೇಶದ ಆರ್ಥಿಕ ಸ್ಥಿತಿ ಸುಧಾರಿಸುವುದು ಸೇರಿದಂತೆ ಹಲವು ವಿಚಾರಗಳಲ್ಲಿ ತನ್ನದೇ ಆದ ನಿಲುವು ಕೈಗೊಳ್ಳುತ್ತಿದೆ. ಪ್ರತಿ ಪಕ್ಷವನ್ನು ವಿಶ್ವಾಸಕ್ಕೆ ಪಡೆಯುವ ಹಾಗೂ ನೀಡಿದ ಸಲಹೆಯನ್ನು ಸ್ವೀಕರಿಸುವ ಕಾರ್ಯ ಮಾಡುತ್ತಿಲ್ಲ ಎಂದು ದೂರಿದೆ.
ಲಾಕ್ಡೌನ್ ಉದ್ಯೋಗ ನಷ್ಟದಿಂದಾಗಿ ದೇಶದ ಜನರು ತತ್ತರಿಸಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಜೂನ್ನಲ್ಲಿ ನಿರಂತರ 23 ಬಾರಿ, ಜುಲೈನಲ್ಲಿ 9 ಬಾರಿ, ಆಗಸ್ಟ್ ತಿಂಗಳಲ್ಲಿ 12 ಬಾರಿ ಕಚ್ಚಾತೈಲ ಬೆಲೆ ಇಳಿಕೆ ಆಗುತ್ತಿದ್ದರೂ ಪೆಟ್ರೋಲ್ ಬೆಲೆ ಏರಿಸಿ ಜನರ ಜೇಬಿಗೆ ಕೊಳ್ಳಿ ಇಡುತ್ತಿದೆ ಎಂದು ಆರೋಪಿಸಿದೆ.
ಕೊರೊನಾ ಭಾರತಕ್ಕೆ ಕಾಲಿಡುವುದಕ್ಕೂ ಮುಂಚೆಯೇ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಆ ಬಗ್ಗೆ ಹಣಕಾಸು ಸಚಿವರು ಏನು ಹೇಳುತ್ತಾರೆ? ಜಿಎಸ್‌ಟಿ ವಿಷಯದಲ್ಲಿಯೂ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ರಾಜ್ಯಗಳಿಗೆ ಅನ್ಯಾಯ ಮಾಡಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ದೂರಿದೆ.
ಫೇಸ್‌ಬುಕ್ ಮತ್ತು ರಾಷ್ಟ್ರೀಯ ಬಿಜೆಪಿ ನಡುವೆ ಲಾಭಕ್ಕಾಗಿ ಕೊಡು-ಕೊಳ್ಳುವಿಕೆಯ ಸಂಬಂಧ ಏರ್ಪಟ್ಟಿದೆ. ಈ ಸಂಬಂಧ ತನಿಖೆ ನಡೆಸಲು ಫೇಸ್‌ಬುಕ್ ಸಂಸ್ಥೆ ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಬೇಕು. ವಿದೇಶಿ ಕಂಪನಿಯೊಂದು ಖಾಸಗಿ ಲಾಭದ ಉದ್ದೇಶಕ್ಕಾಗಿ ನಮ್ಮ ದೇಶದಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವಂತಿಲ್ಲ ಎಂದು ಅಭಿಪ್ರಾಯಪಟ್ಟಿದೆ.