ಬೆಂಗಳೂರು: ಜೂನ್ 21 ರಿಂದ ಆಗಸ್ಟ್ 14 ರವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 'ಯೋಗಥಾನ್-2022' ಆಯೋಜಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿಯನ್ನು ರಚಿಸಿ ಸರ್ಕಾರ ಆದೇಶಿಸಿದೆ.
ರಾಜ್ಯವ್ಯಾಪಿ ನಡೆಯುವ ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ (ಆಗಸ್ಟ್ 14, 2022ರಂದು) ಸುಮಾರು 5 ಲಕ್ಷ ಜನರು ಯೋಗಾಸನ ಮಾಡಲಿದ್ದಾರೆ. ಈ ಮೂಲಕ ಗಿನ್ನಿಸ್ ದಾಖಲೆಗೆ ವೇದಿಕೆ ಕಲ್ಪಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದರ ಜೊತೆಗೆ ಕಾರ್ಯಕ್ರಮ ಯಶಸ್ವಿಗೊಳಿಸುವ ಸಂಬಂಧ ರಾಜ್ಯ ಮತ್ತು ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿಯನ್ನು ರಚಿಸಲು ಕೋರಿತ್ತು.
ರಾಜ್ಯ ಮಟ್ಟದ ಸಮಿತಿಗೆ ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರಾಗಿರುತ್ತಾರೆ. ಉಳಿದಂತೆ, 12 ಮಂದಿ ಸದಸ್ಯರನ್ನು ನೇಮಿಸಲಾಗಿದೆ. ಅದೇ ರೀತಿ ಜಿಲ್ಲಾ ಮಟ್ಟದ ಸಮಿತಿಗೆ ಡಿಸಿಗಳು ಅಧ್ಯಕ್ಷರಾಗಿದ್ದು, ಉಳಿದಂತೆ 8 ಸದಸ್ಯರನ್ನು ನೇಮಿಸಲಾಗಿದೆ. ಯೋಗಥಾನ್ ಯಶಸ್ವಿಗಾಗಿ ಈ ಸಮಿತಿಗಳು ಸಭೆಗಳನ್ನು ನಡೆಸಿ, ವಿವಿಧ ಇಲಾಖೆಗಳ ಜೊತೆ ಸಮನ್ವಯತೆ ಸಾಧಿಸಬೇಕು.
ಇದನ್ನೂ ಓದಿ: ಉತ್ತರಾಖಂಡದ ದೀಪಾಗೆ ಒಲಿದ 'ಯೋಗ'.. ಪ್ರಧಾನಿ ಮೋದಿ ಜೊತೆ ಯೋಗ ಪ್ರದರ್ಶನ