ಬೆಂಗಳೂರು: ರಾಜ್ಯದಲ್ಲಿ ತೀವ್ರವಾಗಿರುವ ಮಾರಣಾಂತಿಕ ಕೊರೊನಾ ವೈರಸ್ನಿಂದಾಗಿ ಜನಜೀವನ ತುಂಬಾ ದುಸ್ತರವಾಗಿದೆ. ಈ ಸಂದರ್ಭ ಸರ್ಕಾರ ಕೈಗಾರಿಕೆಗಳ ಸಹಾಯಕ್ಕೆ ಮುಂದಾಗಬೇಕು ಎಂದು ಶಾಸಕ ಆರ್.ವಿ.ದೇಶಪಾಂಡೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಕೈಗಾರಿಕಾ ಘಟಕಗಳು, ವ್ಯಾಪಾರಿ ಸಂಸ್ಥೆಗಳು, ಮಾಲ್‍ಗಳು ತುಂಬಾ ತೊಂದರೆ ಅನುಭವಿಸುತ್ತಿವೆ. ಎರಡು ವಾರಗಳಿಂದ ಈ ಕೈಗಾರಿಕೆಗಳು ಆರ್ಥಿಕ ಸಂಕಷ್ಟದಿಂದ ಬಳಲುತ್ತಿವೆ ಎಂದಿದ್ದಾರೆ.
ಈಗ ವಿದ್ಯುತ್ ಶುಲ್ಕ, ನೀರಿನ ಶುಲ್ಕ, ಆಸ್ತಿ ತೆರಿಗೆ ಹಾಗೂ ಇತರ ತೆರಿಗೆಗಳನ್ನು ತುಂಬುವ ಸಮಯ ಬಂದಿದೆ. ಈಗಾಗಲೇ ಸಾಕಷ್ಟು ನಷ್ಟ ಅನುಭವಿಸುತ್ತಿರುವ ಈ ಉದ್ಯಮಗಳಿಗೆ ಇದು ತುಂಬಾ ಹೊರೆಯಾಗಲಿದೆ. ಅಲ್ಲದೇ, ಪ್ರಧಾನಿ ಆದೇಶದ ಮೇರೆಗೆ ಕೈಗಾರಿಕೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರ ವೇತನ ಕಡಿತಗೊಳಿಸದೇ ಪೂರ್ಣ ವೇತನವನ್ನು ನೀಡಲು ಸೂಚಿಸಲಾಗಿದೆ. ಅದರಂತೆ ನಡೆದುಕೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಉದ್ಯಮಗಳ ಮಾಲೀಕರಿಗೆ ವಿದ್ಯುತ್ ಶುಲ್ಕ, ತೆರಿಗೆ ಸೇರಿದಂತೆ ಇತ್ಯಾದಿ ತುಂಬುವುದು ಕಷ್ಟವಾಗಿದೆ. ಇದರಿಂದ ನಿರುದ್ಯೋಗ ಸಮಸ್ಯೆಯು ಉಲ್ಭಣವಾಗುವ ಸಾಧ್ಯತೆ ಇದೆ. ಕಾರಣ, ಲಾಕ್ಡೌನ್ ಸಂದರ್ಭದಲ್ಲಿ ಈ ಉದ್ಯಮಗಳಿಗೆ ಅನುಕೂಲವಾಗುವಂತೆ ಸ್ಥಳೀಯ ತೆರಿಗೆಗಳಲ್ಲಿ ಮತ್ತು ವಿದ್ಯುತ್ ಸಂಪರ್ಕಕ್ಕೆ ಸಂಬಂಧಿತ ತಿಂಗಳ ನಿಗದಿತ ಶುಲ್ಕದಲ್ಲಿ ರಿಯಾಯಿತಿ ನೀಡುವುದು ಅತ್ಯಗತ್ಯವಾಗಿದೆ ಎಂದಿದ್ದಾರೆ.