ಬೆಂಗಳೂರು : ಬಳ್ಳಾರಿಯ ಜೆಎಂಎಫ್ಸಿ ಕೋರ್ಟ್ ನ್ಯಾಯಾಧೀಶ ಎಸ್ ಜೆ ವಿಜಯ್ ಕುಮಾರ್ ಅವರನ್ನು ಪ್ರಕರಣವೊಂದರಲ್ಲಿ ಆರೋಪಿಯಾಗಿಸಿ ಜಿಲ್ಲಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿರುವ ಎಂ ಮಂಜುನಾಥ್ ಎಂಬುವರ ವಿರುದ್ಧ ಹೈಕೋರ್ಟ್ ಸ್ವಯಂ ಪ್ರೇರಿತ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದೆ.
ಕ್ರಿಮಿನಲ್ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಮಂಜುನಾಥ್, 14 ದಿನಗಳ ಕಾಲ ಜೈಲು ಸೇರಿದ್ದರು. ತಮ್ಮ ಮನವಿಯನ್ನು ನ್ಯಾಯಾಧೀಶರು ಪರಿಗಣಿಸದೆ ತಮಗೆ ಅನ್ಯಾಯ ಎಸಗಿದ್ದಾರೆಂದು ಆರೋಪಿಸಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯದರ್ಶಿ, ಕಳೆದ ಜೂನ್ 13ರಂದು ನಿಮ್ಮ ಸಮಸ್ಯೆಗೆ ಕಾನೂನಾತ್ಮಕ ಪರಿಹಾರ ಕಂಡುಕೊಳ್ಳಬಹುದು ಎಂದು ಪತ್ರ ಬರೆದಿದ್ದರು.
ಈ ಪತ್ರವನ್ನೇ ತಪ್ಪಾಗಿ ಅರ್ಥೈಸಿಕೊಂಡ ಮಂಜುನಾಥ್, ಜೆಎಂಎಫ್ಸಿ ನ್ಯಾಯಾಧೀಶರನ್ನೇ ಮೊದಲ ಆರೋಪಿಯಾಗಿ ನಮೂದಿಸಿ ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ ಐಪಿಸಿ ಸೆಕ್ಷನ್ 166, 205, 120(ಎ), 219 ಮತ್ತು 499 ಅಡಿ ಖಾಸಗಿ ದೂರು ದಾಖಲಿಸಿದ್ದಾರೆ. ಈ ವಿಚಾರ ಇದೀಗ ಹೈಕೋರ್ಟ್ ಗಮನಕ್ಕೆ ಬಂದಿದ್ದು, ಆರೋಪಿ ಮಂಜುನಾಥ್ ಪ್ರಕರಣಕ್ಕೆ ಪ್ರತಿಯಾಗಿ ಸಿಆರ್ಪಿಸಿ 482 ಅಡಿ ಪ್ರಕರಣ ದಾಖಲಿಸಲು ರಿಜಿಸ್ಟ್ರಾರ್ ಜನರಲ್ಗೆ ನಿರ್ದೇಶಿಸಿದೆ.
ನ್ಯಾಯಾಧೀಶರ ರಕ್ಷಣಾ ಕಾಯ್ದೆ-1985ರ ಸೆಕ್ಷನ್ 3(1)ರ ಪ್ರಕಾರ ನ್ಯಾಯಾಂಗ ಅಧಿಕಾರಿಗಳಿಗೆ ಸಂಪೂರ್ಣ ರಕ್ಷಣೆ ಇದ್ದು, ನ್ಯಾಯಾಧೀಶರ ವಿರುದ್ಧ ದೂರು ದಾಖಲಿಸಿಕೊಳ್ಳಲಿಕ್ಕಾಗಲಿ ಅಥವಾ ದೂರನ್ನು ಪರಿಗಣಿಸಲಿಕ್ಕಾಗಲಿ ಯಾವುದೇ ಅವಕಾಶ ಇಲ್ಲ ಎಂದು ರಿಜಿಸ್ಟ್ರಾರ್ ಜನರಲ್ ಅವರಿಗೆ ಪ್ರಕರಣ ದಾಖಲಿಸಿಕೊಳ್ಳಲು ನಿರ್ದೇಶಿಸುವ ವೇಳೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.