ಬೆಂಗಳೂರು: ಪಾದರಾಯನಪುರದಲ್ಲಿ ಪೊಲೀಸರು ಎಷ್ಟೇ ಕಠಿಣ ಕ್ರಮಗಳನ್ನು ವಿಧಿಸಿದರೂ ಜನ ಮಾತ್ರ ಪೊಲೀಸರ ನಿಯಮಗಳಿಗೆ ಡೋಂಟ್ ಕೇರ್ ಅಂತಿದ್ದಾರೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕೇಸ್ ಅಟ್ಟಹಾಸ ಜಾಸ್ತಿಯಾಗುತ್ತಿದೆ. ಹೀಗಾಗಿ ಕಂಟೇನ್ಮೆಂಟ್ ಝೋನ್ಗಳಲ್ಲಿ ಬಹಳಷ್ಟು ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಇಲಾಖೆ, ಬಿಬಿಎಂಪಿ ಹಾಗೂ ಪೊಲೀಸರು ಕೈಗೊಳ್ಳುತ್ತಿದ್ದಾರೆ.
ಅತಿಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾದ ಪಾದರಾಯನಪುರದಲ್ಲಿ ಇನ್ನೂ ಎಚ್ಚೆತ್ತುಕೊಳ್ಳದ ಜನರು ಅಗತ್ಯ ವಸ್ತುಗಳ ನೆಪದಲ್ಲಿ ಮಾಸ್ಕ್ ಹಾಕದೇ, ದೈಹಿಕ ಅಂತರವಿಲ್ಲದೇ ಆಟೋಗಳಲ್ಲಿ, ಬೈಕ್ ಗಳಲ್ಲಿ ಓಡಾಡ್ತಿದ್ದಾರೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದರೂ ಪಾದರಾಯನಪುರದ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಪಾದರಾಯನಪುರ ಬಳಿ ಭದ್ರತೆಗೆ ತೆರಳಿದ ಹೆಡ್ ಕಾನ್ಸ್ಟೇಬಲ್ಗೆ ಮಾತ್ರವಲ್ಲದೇ, ಕಾರ್ಪೊರೇಟರ್ ಇಮ್ರಾನ್ ಪಾಷಾಗೂ ಈಗಾಗಲೇ ಕೊರೊನಾ ದೃಢಪಟ್ಟಿತ್ತು. ಇಮ್ರಾನ್ ಪಾಷಾ ಆಸ್ಪತ್ರೆಯಿಂದ ಬಿಡುಗಡೆಯಾದ ಸಂದರ್ಭದಲ್ಲಿ ಜನ ಗುಂಪಾಗಿ ಸೇರಿ ನಿಯಮ ಉಲ್ಲಂಘನೆ ಮಾಡಿದ ಕಾರಣ ಪಾದರಾಯನಪುರದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಇಷ್ಟಿದ್ದರೂ ಕೂಡಾ ಜನರ ಓಡಾಟ ನಿಂತಿಲ್ಲ.