ಬೆಂಗಳೂರು: ರಾಜ್ಯದಲ್ಲಿ ಆರೋಪಿಗಳಿಗೆ ಉತ್ತರ ಪ್ರದೇಶದ ಬುಲ್ಡೋಜರ್ ಮಾದರಿ ಶಿಕ್ಷೆಯ ಬಗ್ಗೆ ಚರ್ಚೆ ನಡೆದಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ತಿಳಿಸಿದರು.
ಶಿವಮೊಗ್ಗದಲ್ಲಿ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿಂದು ಪ್ರತಿಕ್ರಿಯಿಸಿದ ಅವರು, ಒಬ್ಬ ಅಮಾಯಕನಿಗೆ ಚಾಕು ಇರಿದಿದ್ದಾರೆ. ಗಾಯಾಳು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ. ಈಗಾಗಲೇ ಆಪರೇಷನ್ ಆಗಿದ್ದು, ಹತ್ತು ದಿನ ಚಿಕಿತ್ಸೆ ನಡೆಯಲಿದೆ ಎಂದು ಹೇಳಿದರು.
ಇಂತಹ ಕೃತ್ಯ ಮಾಡಿದವರಿಗೆ ತಕ್ಕ ಶಿಕ್ಷೆ ಆಗಲಿದೆ. ಈ ಘಟನೆಯಲ್ಲಿ ಪೊಲೀಸರ ತಪ್ಪು ಇಲ್ಲ. ಅಂಗಡಿ ಮುಂದೆ ನಿಂತ ಅಮಾಯಕನಿಗೆ ಚಾಕು ಇರಿದಿದ್ಧಾರೆ. ಪಾಪ ಪೊಲೀಸರು ಏನು ಮಾಡುತ್ತಾರೆ?. ನಾನು ನಿನ್ನೆ ಶಿವಮೊಗ್ಗದಲ್ಲೇ ಇದ್ದೆ. ಪೊಲೀಸರು ತಕ್ಷಣ ಕ್ರಮ ತಗೊಂಡಿದ್ದಾರೆ ಎಂದು ಸಚಿವರು ತಿಳಿಸಿದರು.
ನಿನ್ನೆ ಆರೋಪಿಗಳು ಸಿಕ್ಕಿರಲಿಲ್ಲ. ಶೀಘ್ರವೇ ಅವರನ್ನು ಬಂಧಿಸುವ ಕೆಲಸ ಮಾಡಲಾಗಿದೆ. ಹೀಗಾಗಿ ಶಿವಮೊಗ್ಗ ನಗರ ಮತ್ತು ಭದ್ರಾವತಿಯಲ್ಲಿ ಇಂದು 144 ಸೆಕ್ಷನ್ ನಿಷೇಧಾಜ್ಞೆ ಸಡಿಲಿಕೆ ಮಾಡಿದ್ದೇವೆ. ಬಂಧಿತರಲ್ಲಿ ಒಬ್ಬನ ವಿರುದ್ಧ ಕ್ರಿಮಿನಲ್ ಕೇಸ್ ಇದೆ ಅಂತ ಗೊತ್ತಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಶಿವಮೊಗ್ಗ ಘಟನೆ ಆಕಸ್ಮಿಕವಲ್ಲ, ಸರ್ಕಾರದ ಕಠಿಣ ಕ್ರಮ ಹಾಸ್ಯಾಸ್ಪದ: ಮುತಾಲಿಕ್