ದಾವೋಸ್/ಬೆಂಗಳೂರು : ಮೂರು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ಬೆಂಗಳೂರಿನ ಪೂರ್ವ ವಲಯದಲ್ಲಿ 691 ಮನೆಗಳಿಗೆ ನೀರು ನುಗ್ಗಿ ನಷ್ಟವಾಗಿದೆ. ಈ ಕುಟುಂಬಗಳಿಗೆ ಎರಡು ದಿನಗಳೊಳಗೆ ತಲಾ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಕಾರ್ಯಪಡೆ ಮುಖ್ಯಸ್ಥ, ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಸೂಚನೆ ನೀಡಿದ್ದಾರೆ.
ಮಳೆಯಿಂದ ಉಂಟಾಗುವ ಸಮಸ್ಯೆಗಳ ನಿರ್ವಹಣೆಗೆ ಬೆಂಗಳೂರು ಪೂರ್ವ ವಲಯದ ಕಾರ್ಯಪಡೆ ಮುಖ್ಯಸ್ಥರಾಗಿ ನೇಮಕಗೊಂಡಿರುವ ಅವರು ದಾವೋಸ್ನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳ ಸಭೆ ನಡೆಸಿದ ಸಂದರ್ಭದಲ್ಲಿ ಮೇಲಿನ ಸೂಚನೆ ನೀಡಿದರು.
ತಲಾ 25,000 ರೂಪಾಯಿಯಂತೆ ದವಸ-ಧಾನ್ಯ ನಷ್ಟದಂತಹ ಸಮಸ್ಯೆಗಳನ್ನು ಎದುರಿಸಿರುವ 691 ಕುಟುಂಬಗಳಿಗೆ ಒಟ್ಟು ಪರಿಹಾರದ 1.73 ಕೋಟಿ ರೂಪಾಯಿ ಆಗುತ್ತದೆ. ಸಂಬಂಧಿಸಿದ ದಾಖಲೀಕರಣವನ್ನು ಮಂಗಳವಾರ ಮುಗಿಸಿ ಬುಧವಾರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ (ಡಿಬಿಟಿ) ಮಾಡಬೇಕು ಎಂದು ಕಾಲಮಿತಿ ನಿಗದಿಗೊಳಿಸಿದರು.
ಗುತ್ತಿಗೆದಾರರಿಗೆ ನೋಟಿಸ್ ನೀಡಿ : ಚರಂಡಿಗಳಲ್ಲಿ ಹೂಳೆತ್ತುವ ಡೀಸಿಲ್ಟಿಂಗ್ ಕೆಲಸವನ್ನು ಗುತ್ತಿಗೆದಾರರಿಗೆ ಈ ಮುಂಚೆಯೇ ವಹಿಸಲಾಗಿತ್ತು. ಆದರೆ, ಇದೀಗ ಗಮನಕ್ಕೆ ಬಂದಿರುವಂತೆ 7 ಕಡೆಗಳಲ್ಲಿ ಗುತ್ತಿಗೆದಾರರು ಡೀಸಿಲ್ಟಿಂಗ್ ಮಾಡಿಲ್ಲ ಎಂಬುದು ಗೊತ್ತಾಗಿದೆ. ಸಂಬಂಧಿಸಿದ ಈ ಗುತ್ತಿಗೆದಾರರಿಗೆ ತಕ್ಷಣವೇ ನೋಟಿಸ್ ಕೊಟ್ಟು, ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ, 20 ದಿವಸಗಳೊಳಗೆ ಡೀಸಿಲ್ಟಿಂಗ್ ಮಾಡಿಸಿ ಚರಂಡಿಗಳಲ್ಲಿ ನೀರು ಅಡೆತಡೆ ಇಲ್ಲದಂತೆ ಹರಿಯುವಂತೆ ಮಾಡಬೇಕು ಎಂದು ಆದೇಶಿಸಿದರು.
ಪೂರ್ವ ವಲಯದಲ್ಲಿ ನೀಲಸಂದ್ರ, ಫ್ರೇಜರ್‌ಟೌನ್, ಸಂಜಯನಗರ ಸೇರಿದಂತೆ 22 ಸ್ಥಳಗಳನ್ನು ‘ರೆಡ್ ಝೋನ್’ ಎಂದು ಗುರುತಿಸಲಾಗಿದೆ. ಇದನ್ನು ಗಮನದಲ್ಲಿರಿಸಿಕೊಂಡು ಅಧಿಕಾರಿಗಳು ತಗ್ಗಿನ ಪ್ರದೇಶಕ್ಕೆ ನೀರು ನುಗ್ಗಬಹುದಾದ ಸಾಧ್ಯತೆಯನ್ನು ನಿರ್ವಹಿಸಲು ಸ್ಥಳಾಂತರಕ್ಕಾಗಿ ಮೊದಲೇ ಯೋಜನೆ ಹಾಕಿಕೊಳ್ಳಬೇಕು. ಇದಕ್ಕಾಗಿ ಹತ್ತಿರದ ಶಾಲೆ ಮತ್ತಿತರ ಕಡೆಗಳಲ್ಲಿ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಬೇಕು.
ಅಧಿಕಾರಿಗಳು ರೆಡ್ಝೋನ್ಗಳಲ್ಲಿ ವಾಸಿಸುತ್ತಿರುವ ಜನರ ಜೊತೆ ಸಂಪರ್ಕದಲ್ಲಿದ್ದು, ಹವಾಮಾನ ಮುನ್ಸೂಚನೆ ಆಧಾರಿತವಾಗಿ ತಯಾರಿ ಮಾಡಿಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಪೂರ್ವ ವಲಯದಲ್ಲಿ ಎರಡು ದಿನಗಳ ಅವಧಿಯಲ್ಲಿ 11 ಸೆಂ.ಮೀ.ನಷ್ಟು ಹೆಚ್ಚಿನ ಮಳೆ ಸುರಿದಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ಕೊಟ್ಟರು. ವಲಯ ಆಯಕ್ತ ರವೀಂದ್ರ, ಜಂಟಿ ಆಯುಕ್ತೆ ಶಿಲ್ಪಾ, ಮುಖ್ಯ ಎಂಜಿನಿಯರ್ ಮೋಹನ್ ಹಾಗೂ ಹಲವು ಅಧಿಕಾರಿಗಳು ಸಭೆಯಲ್ಲಿದ್ದರು.
ಓದಿ: ಭುಗಿಲೆದ್ದ ಪಠ್ಯಪುಸ್ತಕ ಪರಿಷ್ಕರಣೆ ಸೇರ್ಪಡೆ-ಕಡಿತ ವಿಚಾರ.. ಎಲ್ಲದಕ್ಕೂ ಖುದ್ದು ವಿವರಣೆ ನೀಡಿದ್ರು ಶಿಕ್ಷಣ ಸಚಿವ