ಬೆಂಗಳೂರು: ಲವ್ ಜಿಹಾದ್ ನಿಷೇಧ ಕಾಯ್ದೆ ಹೆಚ್ಚು ವಿಸ್ತಾರವಾದ ವಿಷಯ, ಈಗ ಅದು ಕಾನೂನು ಇಲಾಖೆಯ ಪರಿಶೀಲನೆಯಲ್ಲಿದೆ ಎಂದು ಜವಳಿ, ಕೈಮಗ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ ತಿಳಿಸಿದರು.
ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲವ್ ಜಿಹಾದ್ ನಿಷೇಧ ಕಾಯಿದೆ ಬಗ್ಗೆ ಸಮಾಜದ ಮುಖಂಡರ ಜತೆಯೂ ಮಾತುಕತೆ ನಡೆಸಿ, ಕ್ಯಾಬಿನೆಟ್ನಲ್ಲಿ ಚರ್ಚಿಸಿ ಜಾರಿಗೊಳಿಸುತ್ತೇವೆ. ಈ ಕಾಯಿದೆ ಜಾರಿಯಾಗುವುದು ನಿಶ್ಚಿತ. ಕಾಯಿದೆ ಜಾರಿಗೊಳಿಸುವ ಬಗ್ಗೆ ಯಾವುದೇ ಹಿಂಜರಿಕೆ ಇಲ್ಲ ಎಂದರು.
ರಾಜ್ಯದ ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣದ ಜತೆಗೆ ಸರ್ಕಾರದ ರಾಜ್ಯ ಶಿಕ್ಷಣ ಇಲಾಖೆ ಪಠ್ಯಕ್ರಮವನ್ನೂ ಬೋಧಿಸಲು ಉದ್ದೇಶಿಸಲಾಗಿದೆ. ಮದರಸಾ ಶಿಕ್ಷಣವನ್ನು ಎಸ್ಎಸ್ಎಲ್ಸಿಗೆ ತತ್ಸಮಾನ ಎಂದು ಪರಿಗಣಿಸಿ, ಮದರಸಾ ಶಿಕ್ಷಣ ಪಡೆದು ಹೊರ ಬರುವ ವಿದ್ಯಾರ್ಥಿಗಳಿಗೆ ಐಟಿಐ ನಂತಹ ಸ್ಕಿಲ್ ಓರಿಯೆಂಟೆಡ್ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಅವರು ತಿಳಿಸಿದರು.
ಓದಿ: ಸುಪ್ರೀಂ ತೀರ್ಪಿನಿಂದ ಲಾಭ-ನಷ್ಟ ಎರಡೂ ಇದೆ: ಶ್ರೀಮಂತ್ ಪಾಟೀಲ್
ಇನ್ನು ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಸಿಎಂ ಭರವಸೆ ಕೊಟ್ಟಂತೆ ನಮ್ಮ ಉಳಿದ ಸಹೋದ್ಯೋಗಿಗಳಿಗೂ ಸಚಿವ ಸ್ಥಾನ ಕೊಟ್ಟೇ ಕೊಡುತ್ತಾರೆ. ವಿವಿಧ ಕಾರಣಗಳಿಂದ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಕೋವಿಡ್ ಕಾರಣದಿಂದ ಹಣಕಾಸಿನ ಕೊರತೆ ಇದೆ. ಹೀಗಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈ ಬಿಟ್ಟಿದ್ದೇವೆ. ಕೆಲ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಅನುದಾನ ಕಡಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಇಲಾಖೆಯಲ್ಲೂ ಶೇ 50 ರಷ್ಟು ಅನುದಾನ ಕಡಿತ ಆಗಿದೆ. ಕಾಲೋನಿ ಅಭಿವೃದ್ಧಿ ಕಾರ್ಯ ಸ್ಥಗಿತ ಮಾಡಿದ್ದೇವೆ. ಆದರೆ ಅತ್ಯವಶ್ಯಕ ಕಾರ್ಯಗಳನ್ನು ಮಾಡಿದ್ದೇವೆ ಎಂದು ಶ್ರೀಮಂತ ಪಾಟೀಲ ಹೇಳಿದರು.