ಬೆಂಗಳೂರು: ಯುವ ವಕೀಲೆ ಧರಣಿ ಆತ್ಮಹತ್ಯೆ ಪ್ರಕರಣ ಸಂಬಂಧ ಕೊನೆಗೂ ಸಿಐಡಿ ಪೊಲೀಸರು ಕಾರ್ಪೋರೇಟರ್ ವಿ.ಸುರೇಶನನ್ನು ಬಂಧಿಸಿದ್ದಾರೆ.
ಎ.ನಾರಾಯಣಪುರ ವಾರ್ಡ್ ಕಾರ್ಪೋರೇಟರ್ ವಿ.ಸುರೇಶ್ನನ್ನು ತಮಿಳುನಾಡಿನ ಸೇಲಂ ಬಳಿಯ ಎರ್ರಾಕಾಡ್ ರೆಸಾರ್ಟ್ನಲ್ಲಿ ಬಂಧಿಸಿ ನಗರಕ್ಕೆ ಕರೆ ತಂದಿದ್ದಾರೆ. ನಿನ್ನೆ ಸಂಜೆ ಸುರೇಶ್ನನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು.
2018ರ ಡಿ. 31 ರಂದು ಧರಣಿ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಕೆಯ ಮನೆ ಕಬಳಿಸಲು ಕಾರ್ಪೋರೇಟರ್ ಸುರೇಶ್ ಹಾಗೂ ಸಹಚರರು ಮನೆಗೆ ನುಗ್ಗಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ಧರಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದರು.
ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಸಿಸಿಬಿ, ಇದೀಗ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.