ಬೆಂಗಳೂರು : ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಎಸ್.ಆರ್. ವಿಶ್ವನಾಥ್ ಅವರನ್ನು ನೇಮಕ ಮಾಡಿರುವ ಆದೇಶ ರದ್ದು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ವಿಶ್ವನಾಥ್ ಅವರಿಗೆ ಹ್ಯಾಂಡ್ ಸಮನ್ಸ್ ಮೂಲಕ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಕುರಿತು ವಕೀಲ ಎ.ಎಸ್ ಹರೀಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರ ಪರ ವಕೀಲ ಪ್ರಿನ್ಸ್ ಐಸಾಕ್ ವಾದ ಮಂಡಿಸಿ, ಹೈಕೋರ್ಟ್ ಜಾರಿ ಮಾಡಿದ್ದ ನೋಟಿಸ್ ವಾಪಸ್ ಬಂದಿದೆ. ವಿಶ್ವನಾಥ್ ಅವರು ಉದ್ದೇಶಪೂರ್ವಕವಾಗಿ ನೋಟಿಸ್ ಸ್ವೀಕರಿಸಿಲ್ಲ. ಹಾಗಾಗಿ, ಅವರಿಗೆ ಹ್ಯಾಂಡ್ ಸಮನ್ಸ್ ಜಾರಿ ಮಾಡಬೇಕು ಎಂದು ಕೋರಿದರು. ಮನವಿ ಪರಿಗಣಿಸಿದ ಪೀಠ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರಿಗೆ ಹ್ಯಾಂಡ್ ಸಮನ್ಸ್ ಮೂಲಕ ನೋಟಿಸ್ ಜಾರಿ ಮಾಡಲು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ, ವಿಚಾರಣೆ ಮುಂದೂಡಿತು.
ಬಿಡಿಎ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿಗೆ ನಿರ್ದಿಷ್ಟ ನಿಯಮ ಹಾಗೂ ಮಾರ್ಗಸೂಚಿ ಇಲ್ಲ. ಸರ್ಕಾರ ತನಗೆ ಬೇಕಾದವರನ್ನು ಅಧ್ಯಕ್ಷ ಹಾಗೂ ಸದಸ್ಯರ ಸ್ಥಾನಕ್ಕೆ ನೇಮಿಸುತ್ತದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರುವುದಿಲ್ಲ. ಬಿಡಿಎ ಹಾಲಿ ಅಧ್ಯಕ್ಷರಾಗಿರುವ ವಿಶ್ವನಾಥ್ ಅವರು ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಅವರಿಗೆ ಬಿಡಿಎ ಅಧ್ಯಕ್ಷರಾಗಲು ಅರ್ಹತೆ ಇಲ್ಲ. ಆದ್ದರಿಂದ ಶಾಸಕ ಎಸ್.ಆರ್. ವಿಶ್ವನಾಥ್ ಅವರನ್ನು ಬಿಡಿಎ ಅಧ್ಯಕ್ಷರಾಗಿ ನೇಮಿಸಿ ಸರ್ಕಾರ 2020ರ ನವೆಂಬರ್ 24ರಂದು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಅರ್ಜಿದಾರರು ಕೋರಿದ್ದಾರೆ.
ಇದನ್ನೂ ಓದಿ: ವಿವಾದಾತ್ಮಕ ಕಾಯ್ದೆಗಳಿಂದಲೇ ಸದ್ದು ಮಾಡಿದ ಬಿಜೆಪಿ ಸರ್ಕಾರ!