ಬೆಂಗಳೂರು: ಕೋವಿಡ್ ಅಲೆ ಬರುವವರೆಗೂ ಕಾಯದೆ ಕೂಡಲೇ ಜನರು ಲಸಿಕೆ ಪಡೆಯಬೇಕು. ಲಕ್ಷಾಂತರ ಡೋಸ್ ಲಸಿಕೆ ನಮ್ಮ ಬಳಿ ಇದೆ. ಆದರೆ, ಜನರು ಏಕೆ ಲಸಿಕೆ ಪಡೆಯುತ್ತಿಲ್ಲ. ಅಲೆ ಬಂದಾಗ ಎಲ್ಲರೂ ಒಟ್ಟಾಗಿ ಬರುವುದಕ್ಕಿಂತ ಈಗಲೇ ಲಸಿಕೆ ಪಡೆಯಿರಿ ಎಂದು ಆರೋಗ್ಯ ಸಚಿವ ಸುಧಾಕರ್ ಮನವಿ ಮಾಡಿದ್ದಾರೆ.
ಕಳೆದ ಒಂದು ವಾರದಿಂದ ದೇಶದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ. ನಾಳೆ ಪ್ರಧಾನಿ ಜೊತೆ ಸಭೆ ಇದ್ದು, ಸಭೆಯಲ್ಲಿ ಏನೆಲ್ಲಾ ಚರ್ಚೆ ಆಗುತ್ತದೆ ಎಂಬುದನ್ನು ನೋಡಿಕೊಂಡು ನಂತರ ಏನು ಮಾಡಬೇಕೆಂದು ತೀರ್ಮಾನ ಮಾಡುತ್ತೇವೆ. 3ನೇ ಅಲೆಯಲ್ಲಿ ಹೆಚ್ಚಿನ ಸಾವು ನೋವು ಆಗಿಲ್ಲ. ಇದಕ್ಕೆ ಕಾರಣ ಕೊರೊನಾ ಲಸಿಕೆ ವ್ಯಾಪಕವಾಗಿ ನೀಡಿರುವುದು. ಲಸಿಕೆ ಪಡೆಯದವರು, ಎರಡು ಡೋಸ್ ಪಡೆಯದವರು ಈಗಲೇ ಲಸಿಕೆ ಹಾಕಿಸಿಕೊಳ್ಳಿ ಎಂದರು.
ಬೂಸ್ಟರ್ ಡೋಸ್ಗೆ ಹಣ ನೀಡಬೇಕಾದ ವಿಚಾರ: ಇನ್ನು ರಾಜ್ಯದಲ್ಲಿ ಪ್ರತಿ ಲಸಿಕೆಯನ್ನೂ ಉಚಿತವಾಗಿ ನೀಡುತ್ತಾ ಬರಲಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಬೂಸ್ಟರ್ ಡೋಸ್ಗೆ ಹಣ ನೀಡಬೇಕಾದ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ನಾಳೆ ಪ್ರಧಾನಿಯವರ ಜೊತೆ ಸಭೆ ಇದೆ. ಅಲ್ಲಿ ಏನು ಚರ್ಚೆ ಆಗುತ್ತದೆ ಎಂಬುದನ್ನು ನೋಡೋಣ ಎಂದಿದ್ದಾರೆ.
60 ವಯಸ್ಸಿಗಿಂತ ಮೇಲ್ಪಟವರಿಗೆ ಉಚಿತವಾಗಿ ನೀಡುತ್ತಿದ್ದೇವೆ. ಶೇ 98ರಷ್ಟು 2 ಡೋಸ್ ಕೂಡ ಆಗಿದೆ. 60 ವರ್ಷ ಮೇಲ್ಪಟ್ಟವರು ಮೂರನೇ ಡೋಸ್ ಶೇ 54ರಷ್ಟಾಗಿದೆ. ನಮ್ಮ ರಾಜ್ಯದಲ್ಲಿ ಎರಡನೇ ಡೋಸ್ 10 ಕೋಟಿಗೂ ಹೆಚ್ಚು ಲಸಿಕೆ ನೀಡಿದ್ದೇವೆ. ಲಸಿಕೆಯಿಂದ ಸಾವು ನೋವು ಸಂಭವಿಸಿಲ್ಲ. ವ್ಯಾಕ್ಸಿನ್ ತೆಗೆದುಕೊಂಡರೆ ಕೋವಿಡ್ ಬರಲ್ಲ ಅಂತಲ್ಲ. ಸಾವು ನೋವಿನ ಪ್ರಮಾಣ ಕಡಿಮೆ ಇರುತ್ತದೆ. ಮೂರನೇ ಡೋಸ್ ತೆಗೆದುಕೊಂಡವರ ಪ್ರಮಾಣ ಕಡಿಮೆ ಇದೆ ಎಂದರು.
ಇಂದಿನಿಂದ ಮಾಸ್ಕ್ ಕಡ್ಡಾಯ ಮಾಡಿದ್ದು, ಕನಿಷ್ಠ ಜನಜಂಗುಳಿ ಇರುವ ಕಡೆ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಿ. ಒಳಾಂಗಣ ಹಾಗೂ ಜನರ ಗುಂಪು ಇರುವ ಕಡೆ ಮಾಸ್ಕ್ ಕಡ್ಡಾಯವಾಗಿ ಬಳಸಿ ಎಂದು ತಿಳಿಸಿದರು.
4ನೇ ಅಲೆ ಎಂಟ್ರಿ ಆಗಿದ್ಯಾ?: ರಾಜ್ಯದಲ್ಲಿ 4ನೇ ಅಲೆ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಕೇಸ್ನ ಪ್ರಮಾಣ ಇನ್ನೂ ಕಡಿಮೆ ಇದೆ. IIT ಕಾನ್ಪುರದ ತಜ್ಞರು ಜೂನ್ ಅಂತ್ಯದಲ್ಲಿ ಕೊರೊನಾ 4ನೇ ಅಲೆ ಬರಬಹುದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ. 3 ಅಲೆಗಳಲ್ಲಿ ಇವರು ಕೊಟ್ಟ ವರದಿ ನಿಜವಾಗಿದೆ. ಹೀಗಾಗಿ ಜೂನ್ ವೇಳೆಗೆ ಅಥವಾ ಒಂದು ತಿಂಗಳ ಮುಂಚೆಯೇ 4ನೇ ಅಲೆ ಬರುವ ಸಾಧ್ಯತೆ ಇದೆ. ಜೂನ್ನಲ್ಲಿ ಪ್ರಾರಂಭವಾಗಿ ಸೆಪ್ಟೆಂಬರ್- ಅಕ್ಟೋಬರ್ವರೆಗೂ 4ನೇ ಅಲೆ ಇರಬಹುದು ಎಂದರು.
ಲ್ಯಾಬ್ ರಿಪೋರ್ಟ್: ಒಮಿಕ್ರಾನ್ ರೂಪಾಂತರದ ಉಪ ತಳಿ ಇದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಲ್ಯಾಬ್ ವರದಿ ಕಳಿಸಲಾಗಿದ್ದು, 2- 3 ದಿನಗಳಲ್ಲಿ ವರದಿ ಬರಬಹುದು ಎಂದರು. ಇನ್ನು ಮುಂದಿನ ದಿನಗಳಲ್ಲಿ ವರ್ಷಕ್ಕೊಂದು ಡೋಸ್ ಪಡೆಯಬೇಕಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು ಯಾವ ರೀತಿ ತಗೊಬೇಕು ಎಂಬ ಬಗ್ಗೆ ಅವಲೋಕನ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅವಲೋಕನ ನಡೆಸಲಿದೆ.
ಮೇ 16ರಿಂದ ಶಾಲೆಗಳು ಪುನರ್ ಆರಂಭ ಆಗುತ್ತಿದ್ದು, ಕೋವಿಡ್ನಿಂದ ಶಾಲೆಗಳ ಮೇಲೆ ಪರಿಣಾಮ ಬೀಳಲಿದೆಯಾ ಎಂಬುದಕ್ಕೆ ಉತ್ತರಿಸಿದ ಸಚಿವರು, ಕೋವಿಡ್ ಬಂದು ಎರಡು ವರ್ಷ ಆಗಿದೆ. ಹೀಗಾಗಿ ನಾವು ಕೂಡಾ ಕೋವಿಡ್ ಜೊತೆ ಬದುಕಲು ಕಲಿಯಬೇಕು. ಮಾಸ್ಕ್, ಲಸಿಕಾಕರಣದ ಬಗ್ಗೆ ಜನರು ನಿಗಾವಹಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯಕ್ಕೆ ಕಾಲಿಟ್ಟಿದೆಯಾ ಒಮಿಕ್ರಾನ್ ಉಪತಳಿ?: ಇನ್ನೆರಡು ದಿನಗಳಲ್ಲಿ ಬರಲಿದೆ ನಿಖರ ವರದಿ !