ಬೆಂಗಳೂರು: ವಿಧಾನ ಮಂಡಲದಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡಿಸಿದರೆ ಕಾಂಗ್ರೆಸ್ ಪಕ್ಷ ವಿರೋಧ ಮಾಡಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಮುಂದಾಗಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಸಿದ್ದರಾಮಯ್ಯ ಅವರನ್ನು ಇಂದು ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಅವರು, ಈ ಕಾಯ್ದೆಯನ್ನು ಬಿಜೆಪಿ ಆಡಳಿತವಿರುವ ಗೋವಾದಲ್ಲಿ ಏಕೆ ಇದುವರೆಗೂ ಜಾರಿಗೊಳಿಸಿಲ್ಲ?. ಕರ್ನಾಟಕವೇ ಏಕೆ?. ಅಧಿವೇಶನದಲ್ಲಿ ಈ ವಿಚಾರ ಚರ್ಚೆಗೆ ಬಂದಲ್ಲಿ ನಾವು ತೀವ್ರವಾಗಿ ವಿರೋಧಿಸಲಿದ್ದೇವೆ ಎಂದರು.
ನಾನೂ ಹಿಂದೆ ಸಗಣಿ ಬಾಚಿದ್ದೇನೆ, ಗಂಜಲ ಎತ್ತಿದ್ದೇನೆ. ಬಿಜೆಪಿಯ ಯಾವ ನಾಯಕ ಈ ಕೆಲಸವನ್ನೆಲ್ಲಾ ಮಾಡಿದ್ದಾರೆ? ಪಶು ಸಾಕಾಣಿಕೆ ಬಗ್ಗೆ ಬಿಜೆಪಿ ನಾಯಕರಿಗೆ ಎಷ್ಟು ಗೊತ್ತಿದೆ? ಮುದಿ ಎತ್ತನ್ನೋ ಅಥವಾ ಹಸುವನ್ನೋ ಅದು ಸಾಯುವವರೆಗೆ ಸಾಕಲು ಎಷ್ಟು ಖರ್ಚು ಬರುತ್ತೆಂದು ಬಿಜೆಪಿಯವರಿಗೆ ಗೊತ್ತೇ? ಹಸು-ಎತ್ತುಗಳಿಗೆ ವಯಸ್ಸಾದ ಮೇಲೆ ಅವನ್ನು ರೈತರು ಬಿಜೆಪಿಯವರ ಮನೆ ಬಾಗಿಲಿಗೆ ಕೊಂಡುಹೋಗಿ ಬಿಟ್ಟು ಬರಬೇಕೆ ಎಂದು ಪ್ರಶ್ನಿಸಿದರು.
ಹಸು ಮುದಿಯಾದರೆ ಅದನ್ನು ರೈತರು ಆರ್.ಎಸ್.ಎಸ್‌ನವರ ಮನೆಗೆ ಕರೆದುಕೊಂಡು ಹೋಗಲು ಆಗುತ್ತಾ? ದನ ಗೊಡ್ಡಾದಾಗ ಏನು ಮಾಡಬೇಕು? ನಾನೂ ಸಗಣಿ ಹೊತ್ತಿದ್ದೇನೆ, ಸಗಣಿ ಬಾಚಿದ್ದೇನೆ. ಇವರು ಯಾವತ್ತಾದರೂ ಮಾಡಿದ್ದಾರಾ? ಈ ದೇಶದಲ್ಲಿ ಹುಚ್ಚರ ಮನೆಯಲ್ಲಿ ಉಂಡೋನು ಜಾಣ ಎಂಬಂತಾಗಿದೆ ಎಂದು ಕಿಡಿಕಾರಿದರು.
ಆರ್ಎಸ್ಎಸ್ನವರೂ ಕಲಿಯಲಿ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯನವರನ್ನು ನೋಡಿ ಕಲಿಯಲಿ ಎಂಬ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಡಿಕೆಶಿ ಮಾತ್ರ ಅಲ್ಲ ಬಿಜೆಪಿ, ಆರ್ಎಸ್ಎಸ್ನವರು ಕಲಿಯಲಿ ಎಂದು ತಿರುಗೇಟು ನೀಡಿದರು. ಒಳ್ಳೆಯದನ್ನು ಎಲ್ಲರೂ ಕಲಿಯಬೇಕು ಅದರಲ್ಲಿ ತಪ್ಪೇನಿದೆ ಎಂದು ವ್ಯಂಗ್ಯದ ಧಾಟಿಯಲ್ಲಿ ಹೇಳಿದರು.
ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯೂ ಸೇರಿದಂತೆ ಬಿಜೆಪಿ ಹಾಗೂ ಆರ್.ಎಸ್.ಎಸ್ ನಾಯಕರು ನಮ್ಮಲ್ಲಿರುವ ಮಾನವೀಯತೆಯನ್ನು ನೋಡಿ ಕಲಿಯಬೇಕು. ಡಿ.ಕೆ.ಶಿವಕುಮಾರ್ ಅವರಿಗೆ ನೀವು ಕಿವಿಮಾತು ಹೇಳುವುದೇನೋ ಸರಿ. ಆದರೆ ತಾವು ಯಾವಾಗ ಮಾನವೀಯತೆ, ಮನುಷ್ಯತ್ವವನ್ನು ಕಲಿಯುವುದು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸೇರಲು ಕಾರಣ ಇವರಲ್ಲ:
ನನ್ನನ್ನು ಕಾಂಗ್ರೆಸ್ ಸೇರಿಸಿದ್ದು ವಿಶ್ವನಾಥ್ ಎಂಬುದೇ ಶುದ್ಧ ಸುಳ್ಳು. ನನ್ನನ್ನು ಕರೆದುಕೊಂಡು ಹೋಗಿ ಕಾಂಗ್ರೆಸ್‌ನ ಯಾವ ನಾಯಕರನ್ನು ಭೇಟಿ ಮಾಡಿಸಿದ್ದರು ಅಂತ ವಿಶ್ವನಾಥ್ ಅವರನ್ನೇ ಕೇಳಿ ಎಂದು ಟಾಂಗ್ ನೀಡಿದರು. ನಾನು ಕಾಂಗ್ರೆಸ್ ಸೇರಲು ಅಹಮದ್ ಪಟೇಲ್ ಕಾರಣ. ಇದನ್ನೇ ಹಿಂದೆಯೂ ಹಲವು ಬಾರಿ ಹೇಳಿದ್ದೇನೆ. ಕರ್ನಾಟಕದ ಯಾವೊಬ್ಬ ನಾಯಕ ಕೂಡ ನಾನು ಕಾಂಗ್ರೆಸ್ ಸೇರಲು ಕಾರಣರಲ್ಲ ಎಂದು ಸ್ಪಷ್ಟಪಡಿಸಿದರು.
ಈಶ್ವರಪ್ಪ ಸಂವಿಧಾನ ಓದುವುದು ಒಳ್ಳೆಯದು:
ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಮುಸ್ಲಿಂರಿಗೆ ಟಿಕೆಟ್ ನೀಡುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ. ಈ ದೇಶ ಮುಸ್ಲಿಂರಿಗೆ ಸೇರಿದೆಯೋ ಇಲ್ಲವೋ ಎಂದು ಪ್ರಶ್ನಿಸಿದರು. ಅವರು ಸಂವಿಧಾನ ಓದುವುದು ಒಳ್ಳೆಯದು. ಬಿಜೆಪಿಯವರು ಯಾವ ಪುಸ್ತಕವನ್ನೂ ಓದುವುದಿಲ್ಲ. ಆರ್ಎಸ್ಎಸ್ನವರು ಹೇಳಿಕೊಟ್ಟಿದ್ದನ್ನು ಬಂದು ಹೇಳುತ್ತಾರೆ. ಅವರು ಓದುವುದೂ ಇಲ್ಲ. ಬರೆಯುವುದೂ ಇಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.