ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒತ್ತಡಕ್ಕೆ ರಾಜ್ಯ ಬಿಜೆಪಿ ಮಣಿದಿದೆ ಎಂಬ ಮಾತುಗಳು ಕೇಳಿಬಂದಿವೆ. ದ್ವಿ ಸದಸ್ಯ ಇರುವ ಕಡೆ ಒಂದೇ ಸ್ಥಾನಕ್ಕೆ ಅಭ್ಯರ್ಥಿ ಕಣಕ್ಕಿಳಿಸಬೇಕು ಎನ್ನುವ ನಿರ್ಧಾರದಲ್ಲಿ ಬೆಳಗಾವಿಗೆ ರಿಯಾಯಿತಿ ನೀಡಿ ಇರಡು ಸ್ಥಾನಕ್ಕೂ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸಿಕೊಡಬೇಕು ಎನ್ನುವ ನಿರ್ಧಾರ ಮಾಡಿದೆ.
ರಾಜ್ಯದ 25 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿಜೆಪಿಗೆ ನಾಲ್ಕೈದು ಜಿಲ್ಲೆಗಳು ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಕೋಲಾರ, ಮೈಸೂರು, ಕೊಡಗು, ರಾಯಚೂರು ಜಿಲ್ಲೆಗಳ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಮುಂದುವರೆದಿದೆ. ಉಳಿದ ಜಿಲ್ಲೆಗಳಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದೆ. ಮೊದಲ ಆದ್ಯತೆ ಮತ್ತು ಎರಡನೇ ಆದ್ಯತೆಯಂತೆ ಎರಡು ಅಥವಾ ಮೂರು ಹೆಸರುಗಳನ್ನು ಪ್ರತಿ ಕ್ಷೇತ್ರಕ್ಕೆ ನಮೂದಿಸಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಹಾಲಿ ಸದಸ್ಯರಾದ ಉಪ ಸಭಾಪತಿ ಪ್ರಾಣೇಶ್, ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ಪ್ರದೀಪ್ ಶೆಟ್ಟರ್, ಬಿ.ಜಿ ಪಾಟೀಲ್‌ಗೆ ಟಿಕೆಟ್ ಪಕ್ಕಾ ಆಗಿದ್ದು, ಹಾಲಿಗಳಿರುವ ಕ್ಷೇತ್ರಗಳಲ್ಲಿ ಕೊಡಗಿನಲ್ಲಿ ಮಾತ್ರ ಸಮಸ್ಯೆ ಎದುರಾಗಿದೆ. ಅದನ್ನು ಹೈಕಮಾಂಡ್ ವಿವೇಚನೆಗೆ ಬಿಡುವ ನಿರ್ಧಾರಕ್ಕೆ ಬರಲಾಗಿದೆ.
20 ಜಿಲ್ಲೆಗಳ 25 ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು, ಬೆಳಗಾವಿ, ವಿಜಯಪುರ, ಧಾರವಾಡ, ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ದ್ವಿ ಸದಸ್ಯ ಸ್ಥಾನವಿದೆ. ಆದರೆ ಗೊಂದಲವಾಗಬಾರದು ಎನ್ನುವ ಕಾರಣಕ್ಕೆ ದ್ವಿ ಸದಸ್ಯ ಸ್ಥಾನ ಇದ್ದರೂ ಬಿಜೆಪಿ ಒಂದೇ ಸ್ಥಾನಕ್ಕೆ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧರಿಸಿದ್ದು, ಅದರಂತೆ ಪಟ್ಟಿಯನ್ನು ಸಿದ್ದಪಡಿಸಿದೆ. ಆದರೆ ಇದೀಗ ಬೆಳಗಾವಿಯಲ್ಲಿ ಎರಡೂ ಸ್ಥಾನಕ್ಕೆ ಅಭ್ಯರ್ಥಿಗಳ ಹೆಸರು ಕಳುಹಿಸಿಕೊಡಲು ಬಿಜೆಪಿ ನಿರ್ಧರಿಸಿದೆ.
ಜಾರಕಿಹೊಳಿ ಒತ್ತಡಕ್ಕೆ ಮಣಿದ ಬಿಜೆಪಿ?
ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜ್ಯ ಬಿಜೆಪಿಯಲ್ಲಿ ಒತ್ತಡ ಹೇರುತ್ತಿದ್ದು, ಸಹೋದರ ಲಖನ್ ಜಾರಕಿಹೊಳಿಗೆ ಪರಿಷತ್ ಟಿಕೆಟ್ ನೀಡುವಂತೆ ಪಟ್ಟುಹಿಡಿದಿದ್ದಾರೆ. ಆದರೆ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕಮಟಗಿಮಠ ಮರು ಸ್ಪರ್ಧೆ ಅಂತಿಮವಾಗಿರುವುದರಿಂದ ದ್ವಿ ಸದಸ್ಯದಂತೆ ಮತ್ತೊಂದು ಸ್ಥಾನಕ್ಕೆ ಸಹೋದರನಿಗೆ ಟಿಕೆಟ್ ಕೊಡಿ, ಎರಡೂ ಕ್ಷೇತ್ರ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು ಎಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಸರ್ಕಾರ ರಚನೆಗೆ ಕಾರಣರಾಗಿ ಸಚಿವ ಸ್ಥಾನ ಪಡೆದು ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಕಳೆದುಕೊಂಡಿದ್ದರು. ಮರಳಿ ಸಂಪುಟ ಸೇರಲು ಸಾಧ್ಯವಾಗಿಲ್ಲ. ಹೀಗಾಗಿ ಜಾರಕಿಹೊಳಿ ಬೇಡಿಕೆಯನ್ನು ತಿರಸ್ಕರಿಸುವ ಸ್ಥಿತಿಯಲ್ಲಿ ರಾಜ್ಯ ಬಿಜೆಪಿ ಇಲ್ಲ. ಅಲ್ಲದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿರುವ ರಮೇಶ್ ಜಾರಕಿಹೊಳಿ, ನಂತರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರನ್ನು ಭೇಟಿಯಾಗಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೂಲಕವೂ ಸಹೋದರನಿಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ಲಾಬಿ ನಡೆಸಿದ್ದಾರೆ.
ಜಾರಕಿಹೊಳಿ ಒತ್ತಡಕ್ಕೆ ಮಣಿದಿರುವ ಬಿಜೆಪಿ ನಾಯಕರು ಇದೀಗ ಲಖನ್ ಹೆಸರನ್ನೂ ಸೇರಿಸಿ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಿಕೊಡಲು ನಿರ್ಧರಿಸಿದ್ದಾರೆ. ಲಖನ್‌ಗೆ ಟಿಕೆಟ್ ನೀಡುವುದು ಬಿಡುವುದು ಹೈಕಮಾಂಡ್ ನಿರ್ಧಾರಕ್ಕೆ ಬಿಡಲು ರಾಜ್ಯ ಬಿಜೆಪಿ ನಿರ್ಧರಿಸಿದೆ. ಹಾಗಾಗಿ 20 ಕ್ಷೇತ್ರದ ಬದಲು 21 ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಗಳ ಹೆಸರು ಕಳುಹಿಸಿಕೊಡುತ್ತಿದೆ.
ಸಿಎಂ, ಕಟೀಲ್ ಚರ್ಚೆ:
ನಾಮಪತ್ರ ಸಲ್ಲಿಕೆಗೆ ನವೆಂಬರ್ 23 ಕಡೆಯ ದಿನವಾಗಿದ್ದು, ಅಭ್ಯರ್ಥಿಗಳ ಪಟ್ಟಿ ಹೈಕಮಾಂಡ್‌ಗೆ ಕಳುಹಿಸಿಕೊಡುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚರ್ಚೆ ನಡೆಸಿದ್ದು, ಗೊಂದಲವಿಲ್ಲದ ಕ್ಷೇತ್ರಗಳ ಮೊದಲ ಪಟ್ಟಿ, ಗೊಂದಲ ಇರುವ ಕ್ಷೇತ್ರಗಳ ಎರಡನೇ ಪಟ್ಟಿ ಸಿದ್ದಪಡಿಸಿ ಹೈಕಮಾಂಡ್‌ಗೆ ಕಳುಹಿಸಿಕೊಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅದೇ ರೀತಿ ಲಖನ್ ಜಾರಕಿಹೊಳಿ ಸ್ಪರ್ಧೆಯ ವಿಷಯವನ್ನೂ ಹೈಕಮಾಂಡ್‌ಗೆ ಬಿಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.