ಬೆಂಗಳೂರು: ವೇಶ್ಯೆಯರ ಜೊತೆ ಸಂಬಂಧ ಬೆಳೆಸಿಕೊಳ್ಳಲು ರಾಜಧಾನಿಯಲ್ಲಿ ನಿರಂತರವಾಗಿ ಸರಗಳ್ಳತನ ಮಾಡುತ್ತಿದ್ದ ಮೂವರು ಕುಖ್ಯಾತ ಸರಗಳ್ಳರನ್ನು ಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ತಿಂಗಳು ಮೇ 26ರಂದು ಮಹಿಳೆಯನ್ನು ಹಿಂಬಾಲಿಸಿ ಸರಗಳ್ಳತನ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಜಯನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಗಳಾದ ರಮೇಶ್, ಲೋಕೇಶ್ ಹಾಗೂ ಮೊಹಮ್ಮದ್ ಮುದಾಸೀರ್ ಎಂಬುವರನ್ನು ಬಂಧಿಸಿ 140 ಗ್ರಾಂನ ಆರು ಚಿನ್ನದ ಸರ ಹಾಗೂ ಎರಡು ಬೈಕ್ ಜಪ್ತಿ ಮಾಡಿಕೊಂಡಿದೆ.
ಮೂವರು ಆರೋಪಿಗಳು ಬೇರೆ ಬೇರೆ ಏರಿಯಾದವರಾಗಿದ್ದರೂ ಒಗ್ಗೂಡಿಯೇ ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು. ನಗರದ ವಿವಿಧ ಕಡೆ 10ಕ್ಕಿಂತ ಹೆಚ್ಚು ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಜೈಲಿಗೆ ಸೇರಿದ ಆರೋಪಿಗಳು ಅಲ್ಲಿ ಪರಸ್ಪರ ಪರಿಚಿತರಾಗಿ ಸ್ನೇಹಿತರಾಗಿದ್ದರು. ಗ್ಯಾಂಗ್ ರೀತಿಯಲ್ಲಿ ಟೀಂ ಕಟ್ಟಿಕೊಂಡು ಜಾಮೀನು ಸಿಕ್ಕ ಬಳಿಕ ಹೊರಬಂದು ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳ್ಳತನದ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು.
ಸರಗಳ್ಳತನ ಮಾಡಿ ವೇಶ್ಯೆಯರಿಗೆ ನೀಡುತ್ತಿದ್ದ ಕಳ್ಳರು: ನಿರಂತರವಾಗಿ ವೇಶ್ಯೆಯರ ಸಂಪರ್ಕ ಹೊಂದಿದ್ದ ಆರೋಪಿಗಳು ಹಣಕ್ಕಾಗಿ ವಾಮಮಾರ್ಗ ಕಂಡು ಕೊಂಡಿದ್ದರು. ನಗರದ ವಿವಿಧೆಡೆ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಕದ್ದ ಬೈಕಿನಲ್ಲಿ ಸರಗಳ್ಳತನ ಮಾಡುತ್ತಿದ್ದರು. ಕದ್ದ ಸರವನ್ನು ವೇಶ್ಯೆಯರಿಗೆ ನೀಡಿ ಅಂಟಿಸಿಕೊಂಡಿದ್ದ ದುಶ್ಚಟಗಳನ್ನು ತೀರಿಸಿಕೊಳ್ಳುತ್ತಿದ್ದರು. ಕುಡಿತಕ್ಕೆ ದಾಸರಾಗಿದ್ದ ಆರೋಪಿಗಳು ಮೋಜಿನ ಜೀವನ ನಡೆಸುತ್ತಿದ್ದರು.
ಆರೋಪಿ ರಮೇಶ್ ಸುಬ್ರಮಣ್ಯಪುರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಈತನ ವಿರುದ್ಧ 13ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣ ದಾಖಲಾಗಿವೆ. ಲೋಕೇಶ್ ಹಾಗೂ ಮೊಹಮ್ಮದ್ ವಿರುದ್ಧ ತಲಾ 11 ಕೇಸ್ಗಳು ದಾಖಲಾಗಿವೆ. ಸರಗಳ್ಳತನ ಮಾಡಿದರೆ ಹೆಚ್ಚು ಹಣ ಸಿಗಲಿದೆ ಎಂಬ ಕಾರಣಕ್ಕಾಗಿಯೇ ನಿರಂತರವಾಗಿ ಸರಗಳ್ಳತನ ಕೃತ್ಯಗಳಲ್ಲಿ ಮಾತ್ರ ತೊಡಗಿಸಿಕೊಂಡಿದ್ದರು ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಬಾಲಕನ ಕಿಡ್ನಾಪ್ ಪ್ರಕರಣ ಸುಖಾಂತ್ಯ.. ಹೇಗಿತ್ತು ಗೊತ್ತಾ ಪೊಲೀಸರ ಸಿನಿಮಾ ಶೈಲಿಯ ಕಾರ್ಯಾಚರಣೆ?