ಬೆಂಗಳೂರು: ಅಂಬೇಡ್ಕರ್ ಫೋಟೋ ತೆರವು ಮಾಡಿಸಿದ ಆರೋಪದ ಮೇಲೆ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಪಾಟೀಲ್ ಅವರ ವಜಾಗೆ ಆಗ್ರಹಿಸಿ ದಲಿತ ಸಂಘಟನೆಗಳು ಬೃಹತ್ ಮೆರವಣಿಗೆ ಹಮ್ಮಿಕೊಂಡಿವೆ. ಜೊತೆಗೆ ಇದೇ ವೇಳೆ ವಿಧಾನಸೌಧ, ಹೈಕೋರ್ಟ್ ಮುತ್ತಿಗೆಗೆ ಯತ್ನಿಸುವ ಸಾಧ್ಯತೆ ಇರುವ ಹಿನ್ನೆಲೆ ಪೊಲೀಸರು ಭಾರಿ ಭದ್ರತೆ ಕೈಗೊಂಡಿದ್ದಾರೆ.
ಮೈಸೂರಿನ ಜ್ಞಾನಪ್ರಕಾಶ್ ಸ್ವಾಮೀಜಿ ನೇತೃತ್ವದಲ್ಲಿ ಆರಂಭವಾಗಲಿರುವ ರ‍್ಯಾಲಿಯಲ್ಲಿ ನಟ ಚೇತನ್, ದಲಿತ ಮುಖಂಡರಾದ ಬಿ. ಗೋಪಾಲ್, ಹೆಣ್ಣೂರು ಶ್ರೀನಿವಾಸ್, ಮಾವಳ್ಳಿ ಶಂಕರ್. ಎಂ ವೆಂಕಟಸ್ವಾಮಿ, ಜಿಗಣಿ ಶಂಕರ್, ಕೇಶವಮೂರ್ತಿ ಭಾಗಿಯಾಗಲಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ವರೆಗೆ ಬೃಹತ್ ಮೆರವಣಿಗೆ ನಡೆಯುತ್ತಿದ್ದು, ಸಾವಿರಾರು ದಲಿತಪರ ಹೋರಾಟಗಾರರು ಭಾಗಿಯಾಗಿದ್ದಾರೆ.
ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೇರಿ ಮೆರವಣಿಗೆ ಉಸ್ತುವಾರಿಯನ್ನು ಡಿಸಿಪಿಗಳಾದ ಡಿ. ಶರಣಪ್ಪ, ಭೀಮಶಂಕರ್ ಗೂಳೇದ್, ಹರೀಶ್ ಪಾಂಡೆ ಹಾಗೂ ಕುಲದೀಪ್ ಜೈನ್ ನೋಡಿಕೊಳ್ಳಲಿದ್ದಾರೆ. 11 ಎಸಿಪಿಗಳು, 30 ಇನ್ಸ್ಪೆಕ್ಟರ್, 1030 ಮಹಿಳಾ ಮತ್ತು ಪುರುಷ ಸಿಬ್ಬಂದಿ, 10 ಕೆಎಸ್ಆರ್ಪಿ ತುಕಡಿ, 2 ವಾಟರ್ ಜೆಟ್, 2 ಫೈರ್ ಎಂಜಿನ್, 2 ಆ್ಯಂಬುಲೆನ್ಸ್ ನಿಯೋಜನೆ ಮಾಡಲಾಗಿದೆ.
(ಇದನ್ನೂ ಓದಿ: 3ನೇ ದಿನಕ್ಕೆ ಕಾಲಿಟ್ಟ ಕೈ ನಾಯಕರ ಅಹೋರಾತ್ರಿ ಧರಣಿ: ಮೇಕೆದಾಟು ಪಾದಯಾತ್ರೆ ಕುರಿತು ಡಿಕೆಶಿ ಹೇಳಿದ್ದೇನು?)