ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಇಂದು ರಾತ್ರಿ ಕೋವಿಡ್ ನಿಯಂತ್ರಣ ಕುರಿತು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ಕೆಳಕಂಡಂತೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಸರ್ಕಾರದ ವಿಧಿಸಿದ ನಿರ್ಬಂಧಗಳು ಹೀಗಿವೆ..
1. ಬೆಂಗಳೂರಿನಲ್ಲಿ ಜನವರಿ 6 ರಿಂದ ಮುಂದಿನ 2 ವಾರಗಳ ಕಾಲ 10 ಮತ್ತು 11ನೇ ತರಗತಿ ಹೊರತುಪಡಿಸಿ ಉಳಿದೆಲ್ಲಾ ತರಗತಿಗಳಿಗೆ ಆನ್ಲೈನ್ ಕ್ಲಾಸ್.
2. 10 ಮತ್ತು ಪ್ರಥಮ ಪಿಯು ತರಗತಿಗಳು ಯಥಾವತ್ತಾಗಿ ನಡೆಯಲಿದೆ.
3. ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿ
4. ಸಾರ್ವಜನಿಕ ಸ್ಥಳದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಶೇ. 50ರಷ್ಟು ಮಾತ್ರ ಜನರು ಸೇರಲು ಅನುಮತಿ, ಡಬಲ್ ಡೋಸ್ ಕಡ್ಡಾಯ
5. ಹೊರಾಂಗಣ ಮದುವೆ ಕಾರ್ಯಕ್ರಮದಲ್ಲಿ 200 ಜನ, ಒಳಾಂಗಣ ಮದುವೆಯಲ್ಲಿ 100 ಜನರು ಪಾಲ್ಗೊಳ್ಳಲು ಅವಕಾಶ
6. ನಮ್ಮ ಮೆಟ್ರೋ, ಬಸ್, ರೈಲುಗಳ ಸೀಟು ಸಾಮರ್ಥ್ಯಕ್ಕೆ ಅನುಗುಣವಾಗಿ ಅವಕಾಶ
7. ಚರ್ಚ್, ಮಸೀದಿ, ದೇವಸ್ಥಾನಗಳಲ್ಲಿ ಪೂಜೆ, ದರ್ಶನಕ್ಕೆ ಅವಕಾಶ, ಶೇ 50ರಷ್ಟು ಜನ ಸೇರಲು ಅವಕಾಶ
8. ಕ್ರೀಡಾ ಕಾಂಪ್ಲೆಕ್ಸ್, ಜಿಮ್, ಸ್ವಿಮ್ಮಿಂಗ್ ಫೂಲ್‌ಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಭಾಗಿಯಾಗಲು ಅವಕಾಶ
9. ರಾಜಕೀಯ ರ‍್ಯಾಲಿ, ಧರಣಿ ಹಾಗೂ ಪ್ರತಿಭಟನೆಗಳಿಗೆ ಸಂಪೂರ್ಣ ನಿರ್ಬಂಧ
ಕೋವಿಡ್ ದ್ವಿಗುಣ ಆತಂಕ
ಕೋವಿಡ್‌ನ ಮೊದಲ ಅಲೆ ವೇಳೆ ಸೋಂಕಿತರ ಸಂಖ್ಯೆ ದ್ವಿಗುಣವಾಗಲು 15 ದಿನ ತೆಗೆದುಕೊಂಡರೆ ಎರಡನೇ ಅಲೆ ವೇಳೆ 8 ರಿಂದ 10 ದಿನ ತೆಗೆದುಕೊಂಡಿತ್ತು. ಇದೀಗ ಒಂದರಿಂದ ಎರಡೇ ದಿನಕ್ಕೆ ಸೋಂಕು ದ್ವಿಗುಣವಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.