ಬೆಂಗಳೂರು : ಕೊರೊನಾ ವೈರಸ್ ವೇಗವಾಗಿ ಹರಡುವ ಹಿನ್ನೆಲೆಯಲ್ಲಿ ಸುರಕ್ಷಿತ ಕ್ರಮವಾಗಿ ಬಳಸಿದ ಮಾಸ್ಕ್, ಫೇಸ್‌ಶೀಟ್ ಹೆಲ್ಮೆಟ್ ಸೇರಿ ನಿತ್ಯವೂ ವಸ್ತುಗಳ ತಪಾಸಣೆಗೊಳಪಡಿಸಲು ಅನುಕೂಲವಾಗುವಂತೆ ಖಾಸಗಿ ಕಂಪನಿಯೊಂದು ಕೊರೊನಾ ಓವನ್ ಎಂಬ ಯಂತ್ರ ಕಂಡು ಹಿಡಿದಿದೆ.
ಲಾಗ್9 ಮೆಟಿರಿಯಲ್ ಸೈಂಟಿಫಿಕ್ ಪ್ರೈ. ಕಂಪನಿಯು ಕೊರೊನಾ ಓವನ್ ಯಂತ್ರ ಆಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕೊರೊನಾದಿಂದ ವೈರಸ್ ದೂರವಾಗಿಸಿಕೊಳ್ಳಲು ಬಳಸುತ್ತಿರುವ ಮಾಸ್ಕ್ಗಳನ್ನು ಸ್ವಚ್ಛಗೊಳಿಸುವ ಕಾರಣಕ್ಕೆ ಈ ಯಂತ್ರ ಅನ್ವೇಷಿಸಲಾಗಿದೆ.
ಒಮ್ಮೆ ಬಳಸಿದ ಮಾಸ್ಕ್ ಅನ್ನು ಸ್ವಚ್ಚಗೊಳಿಸುವುದು ಆರೋಗ್ಯ ದೃಷ್ಟಿಯಿಂದ ಅನಿವಾರ್ಯವಾದರೂ ಕೆಲವೊಮ್ಮೆ ಕಿರಿಕಿರಿಯಾಗುತ್ತದೆ. ಇಂತಹ ವೇಳೆ ಈ ಕೊರೊನಾ ಓವನ್ ಉಪಯೋಗಕ್ಕೆ ಬರುತ್ತದೆ. ಸರ್ಕಾರಿ ಕಚೇರಿ, ಪೊಲೀಸ್ ಠಾಣೆ, ಬ್ಯಾಂಕ್ ಸೇರಿದಂತೆ ಹತ್ತಕ್ಕಿಂತ ಹೆಚ್ಚು ಜನರು ಕೆಲಸ ಮಾಡುವ ಕಚೇರಿ ಅಥವಾ ಕಂಪನಿಗಳಲ್ಲಿ ಈ ಕೊರೊನಾ ಓವನ್ ಸಹಕಾರವಾಗಲಿದೆ.
ವಿದ್ಯುತ್ ಆಧಾರಿತವಾದ ಈ ಯಂತ್ರದಿಂದ ಹತ್ತು ನಿಮಿಷದಲ್ಲಿ 40 ಮಾಸ್ಕ್ಗಳನ್ನು ಸ್ವಚ್ಛವಾಗಿಸಬಹುದು. ಒಂದು ವೇಳೆ ಮಾಸ್ಕ್ಗೆ ವೈರಸ್ ತಗುಲಿದರೆ ಯಂತ್ರ ಬಳಸಿ ಮಾಸ್ಕ್‌ನ ವೈರಸ್ ಮುಕ್ತಗೊಳಿಸಬಹುದು. ಬ್ರೆಡ್, ಹಣ್ಣು-ಹಂಪಲು, ನೋಟುಗಳು ಸೇರಿದಂತೆ ಅತಿ ಹೆಚ್ಚು ಬಾರಿ ಕೈಗಳಲ್ಲಿ ಮುಟ್ಟುವ ವಸ್ತುಗಳನ್ನು ಓವನ್ ಮೂಲಕ ತಪಾಸಣೆಗೆ ಒಳಪಡಿಸಬಹುದು.
ವಿದ್ಯುತ್ ಶಕ್ತಿಯಿಂದ ಕೆಲಸ ಮಾಡುವ ಈ ಯಂತ್ರ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬ್ಯಾಟರಿ ಆಧಾರಿತ ಯಂತ್ರ ಸಿದ್ದಪಡಿಸುತ್ತಿರುವುದಾಗಿ ಕಂಪನಿಯು ಹೇಳಿಕೊಂಡಿದೆ. ಈಗಾಗಲೇ ಹಲವಾರು ಪೊಲೀಸ್ ಠಾಣೆಗಳಲ್ಲಿ ಈ ಯಂತ್ರ ಕಾರ್ಯನಿರ್ವಹಿಸುತ್ತಿದೆ. ಕೊರೊನಾ ಓವನ್ ಯಂತ್ರಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ಈ ಯಂತ್ರವನ್ನು ಬಳಸುವ ಬಗ್ಗೆ ಅನೇಕ ಕಂಪನಿಗಳು ಉತ್ಸುಕವಾಗಿವೆ.