ಬೆಂಗಳೂರು: ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲದೆ ಅತಂತ್ರವಾಗಿರುವ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡು ಬಹುಮತ ಸಾಬೀತುಪಡಿಸಲಿದ್ದೇವೆ. ಒಟ್ಟಾಗಿ ಹೋಗುವ ಬಗ್ಗೆ ಜೆಡಿಎಸ್ ಒಲವು ತೋರಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ನವದೆಹಲಿಗೆ ತೆರಳುವ ಮುನ್ನ ಆರ್‌ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ನಿಯೋಗ ಭೇಟಿ ಮಾಡಿತ್ತು. ಈ ವೇಳೆ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಚರ್ಚೆ ನಡೆಸಿದ್ದೇವೆ.
ಈ ಬಗ್ಗೆ ವಿಸ್ತೃತ ಚರ್ಚೆ ನಡೆಸದೇ ಇದ್ದರೂ ಒಟ್ಟಾಗಿ ಹೋಗೋಣ ಎಂದು ಹೇಳಿದ್ದೇನೆ. ಅದಕ್ಕೆ ಸ್ಥಳೀಯರ ಜೊತೆ ಚರ್ಚೆ ಮಾಡಿ ತೀರ್ಮಾನಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಕಲಬುರಗಿ ಪಾಲಿಕೆಯಲ್ಲಿ ಒಂದಾಗಿ ಕೆಲಸ ಮಾಡಲು ಅವರು ಕೂಡ ಒಲವು ತೋರಿದ್ದಾರೆ. ಬಹುತೇಕವಾಗಿ ಬಿಜೆಪಿ, ಜೆಡಿಎಸ್ ಸೇರಿ ಕಲಬುರಗಿಯಲ್ಲಿ ಬಹುಮತ ಸಾಬೀತುಪಡಿಸಲಿದ್ದೇವೆ ಎಂದು ಮೈತ್ರಿ ಖಚಿತ ಎನ್ನುವ ಸುಳಿವು ನೀಡಿದರು.
ನಿರ್ಮಲಾ ಸೀತಾರಾಮನ್, ಗಡ್ಕರಿ ಜೊತೆ ಚರ್ಚೆ
ಇಂದು ನವದೆಹಲಿಗೆ ತೆರಳುತ್ತಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಆಗುತ್ತಿದ್ದೇನೆ. ಕೇಂದ್ರ ಪ್ರಾಯೋಜಿತ ಯೋಜನೆಗಳ ಅನುದಾನ ಬಿಡುಗಡೆ ಕುರಿತು ಮಾತುಕತೆ ನಡೆಸಲಿದ್ದೇನೆ. ನಾಳೆ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗುತ್ತೇನೆ. ಲೋಕೋಪಯೋಗಿ ಮತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕುರಿತು ಚರ್ಚೆ ನಡೆಸುತ್ತೇನೆ.
ವಸತಿ ಮತ್ತು ನಗರಾಭಿವೃದ್ಧಿ ಸಚಿವರನ್ನೂ ಭೇಟಿಯಾಗುತ್ತೇನೆ. ವಸತಿ ಮತ್ತು ನಗರಾಭಿವೃದ್ಧಿ ಸಚಿವರು ಬೆಂಗಳೂರಿಗೆ ಬಂದಾಗ ಹಲವು ಯೋಜನೆಗಳ ಬಗ್ಗೆ ಮಾತುಕತೆ ನಡೆಸಿದ್ದೆ. ಮೆಟ್ರೋ ವಿಸ್ತರಣೆ ಸೇರಿದಂತೆ ಇತರ ಯೋಜನೆಗಳ ಬಗ್ಗೆ ಈಗ ಮತ್ತೊಮ್ಮೆ ಚರ್ಚೆ ನಡೆಸಲಿದ್ದೇನೆ. ಮೂರ್ನಾಲ್ಕು ಮಂತ್ರಿಗಳನ್ನು ಭೇಟಿಯಾಗುತ್ತೇನೆ. ಹಾಗೆಯೇ ಪ್ರಹ್ಲಾದ್ ಜೋಶಿ ಪುತ್ರಿಯ ಆರತಕ್ಷತೆ ಸಮಾರಂಭದಲ್ಲಿ ಭಾಗವಹಿಸಲಿದ್ದೇನೆ ಎಂದು ಸಿಎಂ ಬೊಮ್ಮಾಯಿ ಮಾಹಿತಿ ನೀಡಿದರು.
ದೆಹಲಿ ಭೇಟಿ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ಬಗ್ಗೆ ಪೂರ್ವನಿಗದಿ ಕಾರ್ಯಕ್ರಮ ಇಲ್ಲ. ಜೋಶಿ ಪುತ್ರಿ ಆರತಕ್ಷತೆ ಸಮಾರಂಭದಲ್ಲಿ ಸಿಕ್ಕಾಗ ಮಾತುಕತೆ ನಡೆಸುತ್ತೇನೆ. ಆದರೆ, ಸಂಪುಟದಲ್ಲಿ ಖಾಲಿ ಇರುವ 4 ಸ್ಥಾನಗಳ ಭರ್ತಿ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು
ನಿಫಾ ಕುರಿತು ಕಟ್ಟೆಚ್ಚರ
ನಿಫಾ ವೈರಸ್ ಹಾವಳಿ ತಡೆಗೆ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಕೇರಳ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಿದ್ದೇವೆ. ಲಸಿಕಾ ಅಭಿಯಾನ ಹೆಚ್ಚು ಮಾಡಿದ್ದೇವೆ. ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಿದ್ದೇವೆ. ನಮ್ಮ ತಜ್ಞರ ಸಮಿತಿಗೆ ನಿಫಾ ವೈರಸ್ ಬಗ್ಗೆ ತಿಳಿದುಕೊಳ್ಳಲು ತಿಳಿಸಿದ್ದೇನೆ. ಯಾವ ರೀತಿ ಹರಡಲಿದೆ, ಹೇಗೆ ನಿಯಂತ್ರಣಮಾಡಬೇಕು? ಇತ್ಯಾದಿಗಳ ಬಗ್ಗೆ ಮಾಹಿತಿ ಕೇಳಿದ್ದೇನೆ ನಿಯಂತ್ರಣಕ್ಕೆ ಬೇಕಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದರು.
ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಇದೆ, ಮಳೆ ಕಡಿಮೆಯಾದ ಕೂಡಲೇ ಗುಂಡಿ ಮುಚ್ಚಿಸಲು ಬಿಬಿಎಂಪಿಗೆ ಆಯುಕ್ತರಿಗೆ ಸೂಚಿಸಿದ್ದೇನೆ. ಸಮರೋಪಾದಿಯಲ್ಲಿ ಈ ಕೆಲಸವನ್ನು ನಾವು ಮಾಡಲಿದ್ದೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಮೈಸೂರು ಗ್ಯಾಂಗ್ರೇಪ್ ಪ್ರಕರಣ:ಆರೋಪಿಗಳು ನ್ಯಾಯಾಲಯಕ್ಕೆ ಹಾಜರು ಸಾಧ್ಯತೆ