ಬೆಂಗಳೂರು: ತಮ್ಮ ಆಪ್ತ ಸಿಬ್ಬಂದಿಯಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆ ಸೆಲ್ಫ್ ಕ್ವಾರಂಟೈನ್ನಲ್ಲಿರುವ ಸಿಎಂ ಯಡಿಯೂರಪ್ಪ, ಇದೀಗ ಇಮ್ಯುನಿಟಿ ಪವರ್ ಹೆಚ್ಚಿಸುವ ಆಹಾರದ ಮೊರೆ ಹೋಗಿದ್ದಾರೆ.
ಕಾವೇರಿ ನಿವಾಸದಲ್ಲಿ ಸೆಲ್ಫ್ ಕ್ವಾರಂಟೈನ್ನಲ್ಲಿರುವ ಸಿಎಂ, ವಿಟಮಿನ್ ಎ ಮತ್ತು ಸಿ ಅಂಶ ಇರುವ ಆಹಾರ ಪದಾರ್ಥಗಳನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಸೋಂಕು ಬಾರದಿರುವಂತೆ ಸಿಎಂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಲು ಪ್ರಾರಂಭಿಸಿದ್ದಾರೆ. ಈ ಸಂಬಂಧ ವೈದ್ಯರೂ ಸಲಹೆ ನೀಡಿದ್ದು, ಇಮ್ಯುನಿಟಿ ಹೆಚ್ಚಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಿದ್ದಾರೆ ಎನ್ನಲಾಗಿದೆ.
ತಮ್ಮ ಆಹಾರ ಪದ್ಧತಿಯಲ್ಲಿ ಪೌಷ್ಟಿಕ ಆಹಾರಕ್ಕೆ ಮಹತ್ವ ನೀಡಲಾಗುತ್ತಿದೆ. ವಿಟಮಿನ್ ಎ ಮತ್ತು ಸಿ ಇರುವ ಆಹಾರ ಪದಾರ್ಥಗಳು, ಕಷಾಯ, ಬಿಸಿ ಬಿಸಿ ಕಾಫಿ, ಡ್ರೈ ಫ್ರೂಟ್ಸ್, ತಾಜಾ ತರಕಾರಿ, ಸೇರಿದಂತೆ ಹಲವು ಪೌಷ್ಟಿಕ ಆಹಾರ ಸೇವಿಸುತ್ತಿದ್ದಾರೆ.
ಸೋಮವಾರ ಡಿಸಿಗಳ ಜೊತೆ ವಿಡಿಯೋ ಕಾನ್ಫರೆನ್ಸ್:
ಸೋಮವಾರ ಎಲ್ಲ ಜಿಲ್ಲಾಧಿಕಾರಿಗಳ ಜತೆ ಸಿಎಂ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಕಾವೇರಿ ನಿವಾಸದಿಂದಲೇ ಸಿಎಂ ಎಲ್ಲ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿ ಮಾಹಿತಿ ಕಲೆ ಹಾಕಲಿದ್ದಾರೆ. ಜಿಲ್ಲೆಗಳಲ್ಲಿನ ಕೊರೊನಾ ಸ್ಥಿತಿಗತಿ, ನಿಯಂತ್ರಣ ಕ್ರಮ, ಪ್ರಕರಣದಲ್ಲಿನ ಏರಿಕೆ ಮುಂತಾದುವುಗಳ ಬಗ್ಗೆ ಸಿಎಂ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಲಿದ್ದಾರೆ. ಸೆಲ್ಫ್ ಕ್ವಾರಂಟೈನ್ನಲ್ಲಿರುವ ಕಾರಣ ಕಾವೇರಿ ನಿವಾಸದಿಂದಲೇ ಎಲ್ಲ ಜಿಲ್ಲೆಗಳ ಡಿಸಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಕೈಗೊಳ್ಳಲಿದ್ದಾರೆ.