ಆನೇಕಲ್ : ಅಪ್ಪ-ಅಮ್ಮನ ಜಗಳದ ಮಧ್ಯೆ ಮೂರು ತಿಂಗಳ ಹೆಣ್ಣು ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರು-ಹೊಸೂರು ಹೆದ್ದಾರಿಯ ಆನೇಕಲ್ ತಾಲೂಕಿನ ಯಡವನಹಳ್ಳಿಯಲ್ಲಿ ನಡೆದಿದೆ.
ಜನನಿ ಮತ್ತು ಶ್ರೀನಿವಾಸ್ ದಂಪತಿಯ ಮಗು ಸ್ಪಂದನ ಮೃತ ಕಂದಮ್ಮ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲೂಕಿನ ನಿವಾಸಿಗಳಾಗಿರುವ ಇವರು, ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಪ್ರತಿದಿನ ಜಗಳ ಮಾಡುತ್ತಿದ್ದ ದಂಪತಿಯ ಗಲಾಟೆ ನಿನ್ನೆ ಅತಿರೇಕಕ್ಕೆ ಹೋದ ಕಾರಣ ರಾತ್ರಿ 11 ಘಂಟೆಯ ಸುಮಾರಿಗೆ ಈ ಘಟನೆ ನಡೆದಿದೆ.
ಮಗು ಜೋಳಿಗೆಯಲ್ಲಿ ಮಲಗಿದ್ದಾಗ, ಶ್ರೀನಿವಾಸ್ ಜಗಳದ ಭರಾಟೆಯಲ್ಲಿ ಪತ್ನಿಯನ್ನು ಜೋರಾಗಿ ನೂಕಿದ್ದರಿಂದ ಅವರು ಮಗು ಮಲಗಿದ್ದ ಜೋಳಿಗೆ ಮೇಲೆ ಬಿದ್ದಿದ್ದಾರೆ. ಆಗ ಮಗು ಅಳಲು ಪ್ರಾರಂಭಿಸಿದಾಗ, ಥೂ.. ಇದೊಂದು ಅಂತಾ ಮಗುವನ್ನು ತೆಗೆದು ತಂದೆ ಶ್ರೀನಿವಾಸ್ ಗೋಡೆಗೆ ಬಿಸಾಡಿದ್ದಾನೆ.
ನಂತರ ಮಗು ಪ್ರಜ್ಞೆ ತಪ್ಪಿತ್ತು. ತಕ್ಷಣ ತಾಯಿ ಮಗುವನ್ನು ಕರೆದುಕೊಂಡು ಹೊಸೂರಿನ ಆಸ್ಪತ್ರೆಗೆ ಹೋದಾಗ ಮಗು ಸಾವನ್ನಪ್ಪಿತ್ತು. ಸದ್ಯ ಪಾಪಿ ತಂದೆಯನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.