ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ 'ನಮ್ಮ ಮೆಟ್ರೋ' ಆರ್ಥಿಕ ಸಂಕಷ್ಟದಿಂದ ಹಳಿ ತಪ್ಪಿದೆ. ಕಳೆದ ಹತ್ತು ವರ್ಷದಿಂದ ಮೇಲಿಂದ ಮೇಲೆ ನಷ್ಟ ಅನುಭವಿಸುತ್ತಲೇ ಸವಾರಿ ಮಾಡುತ್ತಿರುವ ಮೆಟ್ರೋ ನಿಗಮ ಪ್ರಸಕ್ತ ವರ್ಷದಲ್ಲೂ ಕಳೆದ ವರ್ಷಕ್ಕಿಂತಲೂ ಹೆಚ್ಚಿನ ನಷ್ಟ ಕಂಡಿದೆ. ಈ ಹಣಕಾಸು ವರ್ಷದಲ್ಲಿ ಬರೋಬ್ಬರಿ 335 ಕೋಟಿ ರೂ. ನಷ್ಟವನ್ನು ಅನುಭವಿಸಿದೆ.
ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ನಗರ ಮಂದಿಗೆ ಸುಖಕರ ಪ್ರಯಾಣ ನೀಡುತ್ತಿರುವ ನಮ್ಮ ಮೆಟ್ರೋ ನಷ್ಟದಲ್ಲಿ ಸಂಚಾರ ಮಾಡುತ್ತಿದೆ. ಇಂತಹ ಆಘಾತಕಾರಿ ಮಾಹಿತಿಯನ್ನ ಬಿಎಂಆರ್‌ಸಿಎಲ್ ವಾರ್ಷಿಕ ವರದಿ ಮೂಲಕ ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಆರಂಭ ಮಾಡಿ ಹತ್ತು ವರ್ಷ ಕಳೆದಿದೆ.
ಪ್ರತಿ ವರ್ಷವೂ ನಷ್ಟ ಕಂಡಂತೆ ಈ ಬಾರಿಯೂ ನೂರಾರು ಕೋಟಿ ನಷ್ಟವಾಗಿದೆ. ಪರಿಣಾಮ ಮೊದಲ ಹಂತದ ಕಾಮಗಾರಿಗೆ ಮಾಡಿರುವ ಸಾಲಕ್ಕೆ ಪ್ರತಿಯಾಗಿ ಕೋಟ್ಯಂತರ ರೂ. ಬಡ್ಡಿ ಸಂದಾಯ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಿರುವುದೇ ನಷ್ಟಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ನಮ್ಮ ಮೆಟ್ರೋ ನಷ್ಟದ ವಿವರ ಹೀಗಿದೆ :
2013- 14 | 83 ಕೋಟಿ ನಷ್ಟ |
---|---|
2014-15 | 33 ಕೋಟಿ ನಷ್ಟ |
2015-16 | 341 ಕೋಟಿ ನಷ್ಟ |
2016-17 | 457 ಕೋಟಿ ನಷ್ಟ |
2017-18 | 352 ಕೋಟಿ ನಷ್ಟ |
2018-19 | 498 ಕೋಟಿ ನಷ್ಟ |
2020-21 | 320 ಕೋಟಿ ನಷ್ಟ |
2021-22 | 335 ಕೋಟಿ ನಷ್ಟ |
ಮೆಟ್ರೋ ಸಂಚಾರ ಪ್ರಾರಂಭವಾಗಿ 10 ವರ್ಷವಾದರೂ ಮೆಟ್ರೋ ಆದಾಯದಲ್ಲಿ ಸುಧಾರಣೆಯಾಗುತಿಲ್ಲ. ಮೊದಲ ಹಂತಕ್ಕೆ ಮಾಡಿರುವ ಸಾಲಕ್ಕೆ ಹೆಚ್ಚು ಬಡ್ಡಿ ಹೊರೆ ಕಾರಣದಿಂದ ಹಾಗೂ ನಿರ್ವಹಣೆ ವೆಚ್ಚ ಹೆಚ್ಚಾಗುತ್ತಿರುವ ಕಾರಣ ಸುಧಾರಣೆಯಾಗುತ್ತಿಲ್ಲ. ಇದು ಮೆಟ್ರೋ ನಿಗಮಕ್ಕೆ ತಲೆನೋವಾಗಿ ಪರಿಣಮಿಸಿದೆ.
6 ಬೋಗಿ ಮೆಟ್ರೋ ರೈಲು ಆರಂಭವಾದರೂ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಯಷ್ಟು ಏರಿಕೆಯಾಗಲಿಲ್ಲ. ಮೆಟ್ರೋ ಮೊದಲ ಹಂತದಲ್ಲಿ 5 ಲಕ್ಷ ಪ್ರಯಾಣಿಕರು ಸಂಚಾರ ಮಾಡುತ್ತಾರೆ ಎಂದು ಅಂದಾಜಿಸಿದ್ದರು. ಆದರೆ, ನಿರೀಕ್ಷೆಯಂತೆ ಮೆಟ್ರೋ ಪ್ರಯಾಣಿಕರು ಬೋಗಿ ಹತ್ತದ ಕಾರಣ ಅಧಿಕಾರಿಗಳಿಗೆ ತಲೆನೋವಾಗಿದೆ.
ಕಳೆದ 10 ವರ್ಷದಿಂದ ಬಿಎಂಆರ್‌ಸಿಎಲ್ ನಷ್ಟದಲ್ಲಿ ಸವಾರಿ ಮಾಡುತ್ತಿದೆ. ನಿಗಮಕ್ಕೆ ನಿರೀಕ್ಷಿತ ರೀತಿಯಲ್ಲಿ ಆದಾಯ ಬರುತ್ತಿಲ್ಲ. ಜಾಹೀರಾತು ಹಾಗೂ ನಿಲ್ದಾಣದ ಮಳಿಗೆಗಳಿಂದ ಬರುತ್ತಿದ್ದ ಆದಾಯ ನೆಲಕಚ್ಚಿದೆ. ಹೀಗಾಗಿ, ನಿಗಮ ವರ್ಷದಿಂದ ವರ್ಷಕ್ಕೆ ಇನ್ನಷ್ಟು ಬರ್ಬಾದ್ ಆಗುತ್ತಿದೆ. ಜತೆಗೆ ಫೇಸ್ 1 ಯೋಜನೆಗೆ ಮಾಡಿರುವ ಕೋಟ್ಯಂತರ ರೂ. ಸಾಲಕ್ಕೆ ಬಡ್ಡಿ ಕಟ್ಟುವುದೇ ದೊಡ್ಡ ಸಮಸ್ಯೆಯಾಗಿದೆ. ಇನ್ನು ಎರಡನೇ ಹಂತ ಪೂರ್ಣವಾದ ನಂತರ ಆರ್ಥಿಕವಾಗಿ ಚೇತರಿಕೆಯಾಗುತ್ತಾ ಎಂಬುವುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಮೇಲೆ ಕಲ್ಲು ತೂರಾಟ.. ಕೃತ್ಯ ತಪ್ಪಿಸಲು ಕೈಗೊಂಡ ಕ್ರಮ ಫಲಪ್ರದ : ಅಂಜುಂ ಫರ್ವೇಜ್