ಬಳ್ಳಾರಿ: ಮುಖ್ಯಮಂತ್ರಿ ಹುದ್ದೆ ಬಗ್ಗೆ ಯಾರೂ ಕೂಡ ಹೇಳಿಕೆ ನೀಡಬಾರದೆಂಬ ಸೂಚನೆ ಇದ್ರೂ ಕಾಂಗ್ರೆಸ್‌ನಲ್ಲಿ ಮತ್ತೆ ಮಾಜಿ ಸಿಎಂ ಸಿದ್ದರಾಮಯ್ಯ ಪರ ಶಾಸಕರು ಬ್ಯಾಟಿಂಗ್ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಅಂತ ಜನರ ನಾಡಿ ಮಿಡಿತ ಆಗಿದೆ ಎಂದು ಹಗರಿ ಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಅಭಿಪ್ರಾಯಪಟ್ಟಿದ್ದಾರೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಾವು ಹೋದ ಕಡೆಯೆಲ್ಲಾ ಮುಂದಿನ ಮುಖ್ಯಮಂತ್ರಿಯನ್ನಾಗಿ ಸಿದ್ಧರಾಮಯ್ಯ ಅವರನ್ನ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ಅದು ಕೂಡ ನನ್ನ ವೈಯಕ್ತಿಕ ಅಭಿಪ್ರಾಯವೂ ಕೂಡ ಹೌದು ಎಂದಿದ್ದಾರೆ.
75 ವರ್ಷಗಳ ಬಳಿಕ ಕಳೆದ ಐದು ವರ್ಷಗಳ ಅವಧಿ ಪೂರೈಸಿದ ಏಕೈಕ ಮುಖ್ಯಮಂತ್ರಿ ಆಗಿ ಸಿದ್ಧರಾಮಯ್ಯ ಹೊರಹೊಮ್ಮಿದ್ದಾರೆ. ಅಂಥವರು ಕರ್ನಾಟಕ ರಾಜ್ಯಕ್ಕೆ ಬೇಕಾಗಿದ್ದಾರೆ. ದಿವಂಗತ ಡಿ.ದೇವರಾಜ ಅರಸು ಬಳಿಕ ನಾವು ಕಂಡಂತಹ ಅತ್ಯಂತ ಶ್ರೇಷ್ಠ ಮುಖ್ಯಮಂತ್ರಿ ಆಗಿದ್ದಾರೆ ಎಂದು ಶಾಸಕ ಭೀಮಾನಾಯ್ಕ ಹೇಳಿದ್ದಾರೆ.
ಇದನ್ನೂ ಓದಿ: ವಲಸಿಗರು & ಮೂಲ ಕಾಂಗ್ರೆಸ್ಸಿಗರ ಜಟಾಪಟಿ..! ನಿಲ್ಲದ ತಲ್ಲಣ
'ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ'
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದ್ದೇವೆ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬರಲಿದೆ. ಅಂದಾಜು 130-140 ಸ್ಥಾನಗಳು ಬರಲಿವೆ. ಆಗ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಮುಖ್ಯಮಂತ್ರಿಯನ್ನಾಗಿ ಸಿದ್ಧರಾಮಯ್ಯ ಅವರನ್ನೇ ಮಾಡಬೇಕೆಂದು ನಾನಂತೂ ಪಟ್ಟು ಹಿಡಿಯುವೆ ಎಂದಿದ್ದಾರೆ.
ಮುಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಅವರ ಹೇಳಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಅದರಂತೆಯೇ ಇದು ಕೂಡ ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಹುಬ್ಬಳ್ಳಿಯಿಂದ ಅಂತಾರಾಜ್ಯ ಬಸ್ ಸೇವೆ ಆರಂಭ ; ಹೈದರಾಬಾದ್‌ಗೆ ಹೊರಟ ರಾಜಹಂಸ, ವೇಗದೂತ ಬಸ್
ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಸಿದ್ಧರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಎಂದು ಈಗಾಗಲೇ ಜನರ ನಾಡಿಮಿಡಿತದಲ್ಲಿ ಕೇಳಿ ಬರುತ್ತಿದೆ. ಹೀಗಾಗಿ, ಸಿದ್ಧರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿಯಾದರೆ ಇಡೀ ರಾಜ್ಯವೇ ಸುಭಿಕ್ಷೆಯಲ್ಲಿರಲಿದೆ ಎಂದರು.