ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಹಿರಿಯ ಚಿತ್ರನಟ ಶಿವರಂಜನ್ ಬೋಳಣ್ಣವರ ಮೇಲೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಅದೃಷ್ಪವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಟ್ಟಣದ ಹಳೆಯ ಹನುಮಂತ ದೇವಸ್ಥಾನ ಹತ್ತಿರದ ಅವರ ಮನೆ ಎದುರು ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದ ಆರೋಪಿ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಆದರೆ ಗುರಿ ತಪ್ಪಿದ್ದರಿಂದ ಕೂದಲೆಳೆ ಅಂತರದಲ್ಲಿ ನಟ ಪಾರಾಗಿದ್ದಾರೆ.
ಇದನ್ನೂ ಓದಿ: ಹಿಂದಿನಿಂದ ಬಂದು ಜಪಾನಿನ ಮಾಜಿ ಪ್ರಧಾನಿ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿ; ಬಂದೂಕು ನಿಯಂತ್ರಣ ರಾಷ್ಟ್ರಗಳಲ್ಲಿ ದಿಗ್ಭ್ರಮೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಆರೋಪಿಯ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದರು. ಅಮೃತಸಿಂಧು, ರಾಜಾರಾಣಿ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ಶಿವರಂಜನ್ ನಾಯಕರಾಗಿ ಅಭಿನಯಿಸಿದ್ದಾರೆ. ಅಮೃತಸಿಂಧು ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದರು. 20 ವರ್ಷಗಳ ಹಿಂದೆ ಈ ಚಿತ್ರವನ್ನು ಶಿವರಂಜನ್ ಅವರ ತಂದೆಯೇ ನಿರ್ಮಿಸಿದ್ದರು.