ಬೆಳಗಾವಿ: ನಗರದ ಜಿಲ್ಲಾಕ್ರೀಡಾಂಗಣದಲ್ಲಿ ನಡೆದ ಜನಸೇವಕ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಗರದ ಸಾಂಬ್ರಾ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನ ಮೂಲಕ ನೇರವಾಗಿ ದೆಹಲಿಗೆ ಪ್ರಯಾಣ ಬೆಳೆಸಿದರು.
ಕುಂದಾನಗರಿಯಲ್ಲಿ ಜನಸೇವಕ ಸಮಾವೇಶ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದ ಅಮಿತ್ ಶಾ ಅವರು, ಕೊರೊನಾದಿಂದ ಸಾವನ್ನಪ್ಪಿದ ದಿ.ಕೇಂದ್ರ ಸಚಿವ ಸುರೇಶ ಅಂಗಡಿ ಹಾಗೂ ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪಿದ ಬಿಜೆಪಿಯ ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಜು ಚಿಕ್ಕನಗೌಡ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಓದಿ-ಕೇರಳ ಶ್ರೀ ಅನಂತ ಪದ್ಮನಾಭನ ನಿಧಿ ರಹಸ್ಯ : ನಾಗಬಂಧನದ 6ನೇ ಕೊಠಡಿ ತೆರೆಯಲು ಕೋಲಾರಿಗನ ಉತ್ಸುಕತೆ!
ಇದಾದ ಬಳಿಕ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜನಸೇವಕ ಕಾರ್ಯಕ್ರಮ ಮುಗಿಸಿಕೊಂಡು ಕೆಎಲ್ಇ ಸಂಸ್ಥೆಯಲ್ಲಿ ನೂತನವಾಗಿ ಹದಿನೈದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಇಮ್ಯೂಲೇಶನ್ ಲ್ಯಾಬ್ ಉದ್ಘಾಟನೆ ಮಾಡಿದರು.
ನಂತರ ಮುಖ್ಯಮಂತ್ರಿ, ಸಚಿವರು, ಶಾಸಕರು ಹಾಗೂ ಜಿಲ್ಲಾ ಪ್ರಮುಖ ನಾಯಕರೊಂದಿಗೆ ಸಮಾಲೋಚನೆ ನಡೆಸಿ ನೇರವಾಗಿ ಅಲ್ಲಿಂದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದರು. 7.45ಕ್ಕೆ ಸಾಂಬ್ರಾ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಅಮಿತ್ ಶಾ ದೆಹಲಿಗೆ ಪ್ರಯಾಣ ಬೆಳೆಸಿದರು.