ಬೆಳಗಾವಿ: ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯೊಬ್ಬರು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಖಾನಾಪೂರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ತಾಲೂಕಿನ ಗಂಗವಾಳಿ ಗ್ರಾಮದ ನಿವಾಸಿ ಉಜ್ವಲಾ ಅರುಣ್ ಶಿಂಧೆ(24) ಮೃತ ಮಹಿಳೆ.
ಉಜ್ವಲಾ ಅವರಿಗೆ ನಿನ್ನೆ ತೀವ್ರ ಹೆರಿಗೆನೋವು ಕಾಣಿಸಿಕೊಂಡಿದ್ದು, ಅವರನ್ನು ಖಾನಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆಯ ವೇಳೆ ಆಕೆಯ ಹೊಟ್ಟೆಯಲ್ಲಿ ಅವಳಿ ಮಕ್ಕಳಿರುವುದು ಗೊತ್ತಾಗಿದೆ. ಬಳಿಕ ವೈದ್ಯರು ಕೂಡಲೇ ಹೆರಿಗೆ ಮಾಡಿಸಿದ್ದರು.
ಹೆರಿಗೆಯ ಬಳಿಕ ನವಜಾತ ಶಿಶುಗಳ ಜನನವಾಗಿದೆ. ಶಿಶುಗಳ ಆರೋಗ್ಯ ಪರೀಕ್ಷಿಸಿದ ವೈದ್ಯರು ಸಮರ್ಪಕವಾಗಿ ಬೆಳವಣಿಗೆ ಹೊಂದಿರದ ಕಾರಣ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಿ ಅಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೆರಿಗೆ ಸಮಯದಲ್ಲಿ ತೀವ್ರ ರಕ್ತಸ್ರಾವದಿಂದ ನಿತ್ರಾಣಗೊಂಡಿದ್ದ ಉಜ್ವಲಾ ಅವರು ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಸದ್ಯಕ್ಕೆ ನವಜಾತ ಶಿಶುಗಳು ಚೇತರಿಸಿಕೊಳ್ಳುತ್ತಿವೆ ಎಂದು ಮೂಲಗಳು ತಿಳಿಸಿವೆ.
ಓದಿ: ಕೂದಲು ಕಸಿ ಮಾಡಿಸಿಕೊಂಡ ಮರುದಿನವೇ ಕಾನ್ಸ್ಟೇಬಲ್ ಸಾವು.. 2 ತಿಂಗಳಲ್ಲಿ ಮದುವೆಯಾಗಬೇಕಿದ್ದ ಪೊಲೀಸ್ ಇನ್ನಿಲ್ಲ!