ಮುಂಬೈ(ಮಹಾರಾಷ್ಟ್ರ): ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಸೆಮಿಕಂಡಕ್ಟರ್ ಉತ್ಪಾದನಾ ಕ್ಷೇತ್ರವನ್ನು ಪ್ರವೇಶಿಸಲು ತನ್ನ ಪ್ರಯತ್ನಗಳನ್ನು ಪ್ರಾರಂಭಿಸಿದೆ ಎಂದು ಸಂಬಂಧಿತ ಮೂಲಗಳಿಂದ ತಿಳಿದುಬಂದಿದೆ. ರಿಲಯನ್ಸ್ ಕಂಪನಿಯು ಸೆಮಿಕಂಡಕ್ಟರ್ ತಯಾರಿಕೆ ಕ್ಷೇತ್ರದಲ್ಲಿ ಅವಕಾಶಗಳು ಮತ್ತು ಮಾರ್ಗಗಳನ್ನು ಅನ್ವೇಷಿಸುವ ಪ್ರಕ್ರಿಯೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ರಿಲಯನ್ಸ್ ತನ್ನ ಟೆಲಿಕಾಂ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ವ್ಯವಹಾರಕ್ಕಾಗಿ ಮಾತ್ರವಲ್ಲದೆ ದೇಶದಲ್ಲಿ ಬೆಳೆಯುತ್ತಿರುವ ಚಿಪ್ ಬೇಡಿಕೆಯನ್ನು ಪೂರೈಸಲು ಮತ್ತು ಪೂರೈಕೆಯನ್ನು ಹೆಚ್ಚಿಸಲು ಸಹ ಇವುಗಳ ಉತ್ಪಾದನೆಯನ್ನು ಪ್ರವೇಶಿಸಲು ನೋಡುತ್ತಿದೆ ಎಂದು ತಿಳಿದುಬಂದಿದೆ.
ಚಿಪ್ ತಂತ್ರಜ್ಞಾನ ಕಂಪನಿಗಳೊಂದಿಗೆ ಸಂಪರ್ಕ.. ಸೆಮಿಕಂಡಕ್ಟರ್ ಉತ್ಪಾದನಾ ಘಟಕವನ್ನು ಸ್ಥಾಪಿಸಬೇಕಾದ್ರೆ ದೊಡ್ಡ ಮಟ್ಟದ ಹಣ ಮತ್ತು ಚಿಪ್ ಉತ್ಪಾದನಾ ತಂತ್ರಜ್ಞಾನದಲ್ಲಿ ವ್ಯಾಪಕ ಅನುಭವ ಹೊಂದಿರುವ ಕಂಪನಿಗಳ ಭಾಗವಹಿಸುವಿಕೆ ಅಗತ್ಯವಿರುತ್ತದೆ. ರಿಲಯನ್ಸ್ ಇಂಡಸ್ಟ್ರೀಸ್ ಯಾವುದೇ ಪ್ರಮುಖ ಆರ್ಥಿಕ ಸಮಸ್ಯೆಗಳನ್ನು ಹೊಂದಿಲ್ಲ. ಅದಕ್ಕಾಗಿಯೇ ರಿಲಯನ್ಸ್ ಚಿಪ್ ತಂತ್ರಜ್ಞಾನದ ಪರಿಣತಿ ಹೊಂದಿರುವ ಕಂಪನಿಗಳನ್ನು ಅನ್ವೇಷಿಸುವ ಪ್ರಕ್ರಿಯೆಯಲ್ಲಿದೆ ಎಂದು ಸುದ್ದಿ ಸಂಸ್ಥೆಯೊಂದು ವಿಶ್ವಾಸಾರ್ಹ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಈ ಉದ್ದೇಶಕ್ಕಾಗಿ ರಿಲಯನ್ಸ್ ಈಗಾಗಲೇ ಹಲವಾರು ವಿದೇಶಿ ಚಿಪ್ ತಯಾರಿಕಾ ಕಂಪನಿಗಳೊಂದಿಗೆ ಆರಂಭಿಕ ಹಂತದ ಚರ್ಚೆಗಳನ್ನು ನಡೆಸಿದೆ. ಸ್ಥಾವರ ಸ್ಥಾಪಿಸುವ ಉದ್ದೇಶವೂ ಇದೆ. ಆದರೆ ಯಾವುದೇ ಗಡುವು ನಿಗದಿಪಡಿಸಿಲ್ಲ. ಅದರಲ್ಲಿ ಹೂಡಿಕೆ ಮಾಡಬೇಕಾ? ಅಥವಾ ಬೇಡವಾ? ಎಂಬುದರ ಬಗ್ಗೆ ರಿಲಯನ್ಸ್ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ, ರಿಲಯನ್ಸ್ ಯಾವ ವಿದೇಶಿ ಕಂಪನಿಗಳೊಂದಿಗೆ ಮಾತುಕತೆ ನಡೆಸಿದೆ ಎಂಬ ವಿವರಗಳು ತಿಳಿದುಬಂದಿಲ್ಲ. ಆದ್ರೆ ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಲು ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಭಾರತೀಯ ಐಟಿ ಸಚಿವಾಲಯವನ್ನು ಕೇಳಿದಾಗ ಅವರು ಉತ್ತರವನ್ನು ನೀಡಲು ನಿರಾಕರಿಸಿದರು ಎಂದು ಲೇಖನ ವಿವರಿಸಿದೆ.
ಓದಿ: ವಿಶ್ವಬ್ಯಾಂಕ್ ಸಂಪನ್ಮೂಲ ಹೆಚ್ಚಿಸಲು ಜಿ 20ಯಲ್ಲಿ ಚರ್ಚೆ: ಜಾನೆಟ್ ಯೆಲೆನ್
ಮೋದಿ ಸರ್ಕಾರವು ಭಾರತದಲ್ಲಿ ಚಿಪ್ ತಯಾರಿಕೆಯನ್ನು ಉತ್ತೇಜಿಸಲು ಬಯಸಿದೆ. ಆದರೆ, ಸರ್ಕಾರದ ಈ ಉದ್ದೇಶ ಕಾರ್ಯರೂಪಕ್ಕೆ ಬಂದಿಲ್ಲ. ಪ್ರಸ್ತುತ ಭಾರತದಲ್ಲಿ ಒಂದೇ ಒಂದು ಚಿಪ್ ತಯಾರಿಕಾ ಘಟಕ ಇಲ್ಲ. ವೇದಾಂತ ಮತ್ತು ಫಾಕ್ಸ್‌ಕಾನ್ ಕೂಡ ಚಿಪ್ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಬಯಸುತ್ತವೆ. ಚಿಪ್ ಕೊರತೆಯನ್ನು ನಿಭಾಯಿಸಲು, ರಿಲಯನ್ಸ್ ತನ್ನ ಎಲೆಕ್ಟ್ರಾನಿಕ್ಸ್ ವ್ಯವಹಾರಕ್ಕೆ ತೊಂದರೆಯಾಗದಂತೆ ಈ ವ್ಯವಹಾರವನ್ನು ಪ್ರವೇಶಿಸಲು ಬಯಸುತ್ತದೆ. 2021 ರಲ್ಲಿ ಚಿಪ್ ಕೊರತೆಯಿಂದಾಗಿ ಗೂಗಲ್ ಸಹಯೋಗದೊಂದಿಗೆ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವ ಕಂಪನಿಯ ಯೋಜನೆ ವಿಳಂಬವಾಯಿತು. ಭಾರತ ಸೇರಿದಂತೆ ಇತರೆ ದೇಶಗಳಲ್ಲೂ ಚಿಪ್ ಕೊರತೆ ಕಂಡುಬರುತ್ತಿದೆ.