ನವದೆಹಲಿ : ವಾಟ್ಸ್ಆ್ಯಪ್‌ನ ಹೊಸ ಡೇಟಾ ಗೌಪ್ಯತೆ ನೀತಿಯ ಸುತ್ತಲಿನ ವಿವಾದಗಳ ಮಧ್ಯೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ವಿಚಾರವಾದಿ ಕೆ.ಎನ್.ಗೋವಿಂದಾಚಾರ್ಯ ಅವರು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ, 'ಫೇಸ್‌ಬುಕ್ ಸಮೂಹದ ಕಂಪನಿಗಳ ನಡುವೆ ಡೇಟಾ ವರ್ಗಾವಣೆಗೆ ತೆರಿಗೆ ವಿಧಿಸುವಂತೆ' ಒತ್ತಾಯಿಸಿದ್ದಾರೆ.
ಅಂತರ್ಜಾಲ ಕಂಪನಿಗಳನ್ನು ನಿಯಂತ್ರಿಸಲು ಉತ್ತಮ ಮಾರ್ಗವೆಂದ್ರೆ ಸಾಕಷ್ಟು ತೆರಿಗೆ ವಿಧಿಸುವುದು. ಭಾರತದಲ್ಲಿನ ಟೆಕ್ ದೈತ್ಯರ ದತ್ತಾಂಶ ವಹಿವಾಟಿನ ಮೇಲೆ ತೆರಿಗೆ ವಿಧಿಸಲು ಮುಂಬರುವ ಹಣಕಾಸು ಮಸೂದೆಯಲ್ಲಿ (ಬಜೆಟ್ 2021) ನಿರ್ದಿಷ್ಟ ನಿಬಂಧನೆಗಳನ್ನು ಸೇರಿಸುವ ಮೂಲಕ ನೀವು ಈ ಮಹತ್ವದ ಅಂಶ ಪರಿಗಣಿಸುವಿರಿ ಎಂದು ನಾವು ಭಾವಿಸುತ್ತೇವೆ. ಇದನ್ನು ಜಾರಿಗೆ ತಂದರೆ ಸರ್ಕಾರಕ್ಕೆ ಹೆಚ್ಚಿನ ಆದಾಯ ಹರಿದು ಬರಲು ನೆರವಾಗಲಿದೆ ಮತ್ತು ಭಾರತೀಯರ ಜೀವನ ಸುಧಾರಿಸಲಿದೆ ಎಂದು ಹಣಕಾಸು ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ವಿಶ್ವಾದ್ಯಂತ ತೀವ್ರ ಟೀಕೆಗಳನ್ನು ಎದುರಿಸುತ್ತಿರುವ ವಾಟ್ಸ್‌ಆ್ಯಪ್, ಈಗ ಭಾರತದಲ್ಲಿ ನ್ಯಾಯಾಲಯದ ಪ್ರಕರಣವೊಂದನ್ನು ಎದುರಿಸುತ್ತಿದೆ. ತನ್ನ ಹೊಸ ಡೇಟಾ ಗೌಪ್ಯತೆ ನೀತಿಯನ್ನು ಈ ತಿಂಗಳು ಘೋಷಿಸಿತ್ತು. ಟೀಕೆಯ ಬಳಿಕ ಅದನ್ನು ಮೇ 15ಕ್ಕೆ ಮುಂದೂಡಿದೆ.
ಇದನ್ನೂ ಓದಿ: ಅಮೆರಿಕ ಆರ್ಥಿಕತೆ ಹಾಳು.. ನಿರ್ಲಕ್ಷಿಸಿದರೆ ಸೀದ ಪ್ರಪಾತಕ್ಕೆ- ವೈಟ್ಹೌಸ್ ವಿತ್ತೀಯ ಸಲಹೆಗಾರ ಎಚ್ಚರಿಕೆ!
ರಾಷ್ಟ್ರೀಯ ಸ್ವಾಭಿಮಾನ್ ಆಂದೋಲನ್ ಮುಖ್ಯಸ್ಥರಾದ ಗೋವಿಂದಾಚಾರ್ಯ, ಸರ್ಕಾರವು ಈಗ ಹೊಸ ತೆರಿಗೆ ಮೂಲಗಳನ್ನು ನೋಡಬೇಕಾಗಿದೆ. ಡಿಜಿಟಲ್ ವಲಯವು ಅಂತಹ ಒಂದು ಗೋಲ್ಡ್ ಮೈನ್ ಆಗಿದೆ. ಭಾರತದಲ್ಲಿ 40 ಕೋಟಿ ಬಳಕೆದಾರರೊಂದಿಗೆ ವಾಟ್ಸ್‌ಆ್ಯಪ್ ಮೌಲ್ಯವು ಸುಮಾರು 18 ಬಿಲಿಯನ್ ಡಾಲರ್ ಆಗಬಹುದು. ಅಂದರೆ ಸುಮಾರು 1,48,000 ಕೋಟಿ ರೂ. ಎಂದು ಉಲ್ಲೇಖಿಸಿದ್ದಾರೆ.
ಫ್ರಾನ್ಸ್ ತನ್ನ ಡಿಜಿಟಲ್-ಸೇವಾ ತೆರಿಗೆ ಸಂಗ್ರಹಿಸುವುದನ್ನು ಪುನಾರಂಭಿಸಿದೆ. ಇಟಲಿ ಮತ್ತು ಇಂಗ್ಲೆಂಡ್ ಸೇರಿದಂತೆ ಇತರ ದೇಶಗಳು ಸಹ ಮುಂದಿನ ತಿಂಗಳಲ್ಲಿ ತಮ್ಮ ಆದಾಯ ಸಂಗ್ರಹ ಪ್ರಾರಂಭಿಸಲು ಸಜ್ಜಾಗಿವೆ ಎಂದರು.
ಭಾರತ ಸರ್ಕಾರವು ಈಕ್ವಲೈಸೇಶನ್ ಲೆವಿ ರೂಪದಲ್ಲಿ ಸುಮಾರು 4000 ಕೋಟಿ ರೂ. ಸಂಗ್ರಹಿಸಿದೆ. ಆದ್ದರಿಂದ, ಈ ಟೆಕ್ ದೈತ್ಯರಿಂದ ಆದಾಯ ಮತ್ತು ಕಾರ್ಪೊರೇಟ್ ತೆರಿಗೆ ರೂಪದಲ್ಲಿ ವಸೂಲಿ ಮಾಡುವ ಮೊತ್ತವು ದೊಡ್ಡ ಪ್ರಮಾಣದಲ್ಲಿರುತ್ತದೆ. ಲಕ್ಷಾಂತರ ಭಾರತೀಯರ ಡೇಟಾ ಬಹಳ ಮೌಲ್ಯಯುತವಾಗಿದೆ. ಫೇಸ್‌ಬುಕ್ ಗ್ರೂಪ್ ಕಂಪನಿಗಳ ನಡುವಿನ ಡೇಟಾ ವರ್ಗಾವಣೆಗೆ ತೆರಿಗೆ ವಿಧಿಸಬೇಕಾಗಿದೆ ಎಂದು ಗೋವಿಂದಾಚಾರ್ಯ ಹೇಳಿದರು.