ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ವ್ಯಕ್ತವಾದ ಮಿಶ್ರ ಫಲಿತಾಂಶಗಳಿಂದಾಗಿ ಮುಂಬೈ ಷೇರುಟೆಯಲ್ಲಿಂದು ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 503 ಅಂಕಗಳ ಕುಸಿತ ಕಂಡು 58,283ಕ್ಕೆ ತಲುಪಿದರೆ, ನಿಫ್ಟಿ 143 ಪಾಯಿಂಟ್‌ಗಳ ನಷ್ಟದೊಂದಿಗೆ 17,368ಕ್ಕೆ ಬಂದು ನಿಂತಿದೆ.
ರಿಲಯನ್ಸ್ ಇಂಡಸ್ಟ್ರೀಸ್, ಹೆಚ್‌ಡಿಎಫ್‌ಸಿ, ಬಜಾಜ್ ಫೈನಾನ್ಸ್, ಎಂ ಅಂಡ್ ಎಂ, ನೆಸ್ಲೆ ಇಂಡಿಯಾ ಹಾಗೂ ಎಸ್‌ಬಿಐ ನಷ್ಟು ಅನುಭವಿಸಿದ ಪ್ರಮುಖ ಕಂಪನಿಗಳಾಗಿವೆ. ಬಜಾಬ್ ಫೈನಾನ್ಸ್ ಷೇರುಗಳ ಮೌಲ್ಯದಲ್ಲಿ ಸುಮಾರು ಶೇ.3ರಷ್ಟು ಕುಸಿತ ಕಂಡಿತು. ಮತ್ತೊಂದೆಡೆ ಆಕ್ಸಿಸ್ ಬ್ಯಾಂಕ್, ಟೆಕ್ ಮಹೀಂದ್ರಾ, ಪವರ್‌ಗ್ರೀಡ್ ಹಾಗೂ ಮಾರುತಿ ಷೇರುಗಳು ಲಾಭಗಳಿಸಿದವು.
ಬ್ರಿಟನ್‌ನಲ್ಲಿ ಒಮಿಕ್ರಾನ್ ಪ್ರಮಾಣಗಳು ಹೆಚ್ಚಾಗುತ್ತಿರುವುದು ಜಾಗತಿಕ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನಲ್ಲಿ ಮುಖ್ಯ ಹೂಡಿಕೆ ತಂತ್ರಜ್ಞರಾಗಿರುವ ವಿಕೆ ವಿಜಯ್‌ಕುಮಾರ್ ತಿಳಿಸಿದ್ದಾರೆ.
ಯುಎಸ್ ಫೆಡ್, ಇಸಿಬಿ, ಬ್ಯಾಂಕ್ ಆಫ್ ಇಂಗ್ಲೆಂಡ್ ಹಾಗೂ ಬ್ಯಾಂಕ್ ಆಫ್ ಜಪಾನ್ ಈ ವಾರ ಸಭೆ ಸೇರಿ ಬಡ್ಡಿದರಗಳು, ಬಾಂಡ್‌ಗಳ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಲಿವೆ ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ಭಾರತದಲ್ಲಿ ವಿದೇಶಿ ಬಂಡವಾಳ ಹೊರ ಹರಿವು (ನವೆಂಬರ್‌ನಲ್ಲಿ ರೂ 33,799 ಕೋಟಿ ಮತ್ತು ಡಿಸೆಂಬರ್ 10 ರವರೆಗೆ ರೂ 17,644 ಕೋಟಿ) ಹೆಚ್ಚಾದ ಹಿನ್ನೆಲೆಯಲ್ಲಿ ಷೇರುಗಳ ಮಾರಾಟದ ಒತ್ತಡ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಏಷ್ಯಾದ ಇತರ ಮಾರುಕಟ್ಟೆಗಳಾದ ಸಿಯೋಲ್ ಮತ್ತು ಹಾಂಕಾಂಗ್‌ನಲ್ಲಿನ ಷೇರುಪೇಟೆ ಲಾಭದೊಂದಿಗೆ ಕೊನೆಗೊಂಡರೆ, ಶಾಂಘೈ ಮತ್ತು ಟೋಕಿಯೊ ನಷ್ಟದಲ್ಲಿತ್ತು. ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ.0.11 ಏರಿಕೆಯಾಗಿ 75.23 ಡಾಲರ್‌ಗೆ ತಲುಪಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 1 ಪೈಸೆ ಏರಿಕೆ ಕಂಡು 75.77ರಲ್ಲಿ ವಹಿವಾಟು ನಡೆಸಿದೆ.
ಇದನ್ನೂ ಓದಿ: ಅಬುಧಾಬಿಯಲ್ಲಿ ₹15 ಸಾವಿರ ಕೋಟಿ ವೆಚ್ಚದ ಜಂಟಿ ಉದ್ಯಮ ಆರಂಭಿಸಿದ ರಿಲಯನ್ಸ್