ಮುಂಬೈ: ಕೋವಿಡ್ 19 ತನ್ನ ಕಬಂಧ ಬಾಹುವನ್ನು ಚಾಚಿ ಪ್ರಪಂಚದಾದ್ಯಂತ ಹರಡಿದ್ದು, ಈ ವೇಳೆ ಮಾನವೀಯತೆ ತನ್ನ ಸವಾಲನ್ನು ಎದುರಿಸುತ್ತಿದೆ. ಇಂತಹ ಬಿಕ್ಕಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಕಾರ್ಯಪ್ರವೃತ್ತವಾಗಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಕೋವಿಡ್ 19 ಬಿಕ್ಕಟ್ಟು ಕುರಿತು ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಸ್ಥಿತಿಯನ್ನ ಆರ್ಬಿಐ ಗಮನಿಸುತ್ತಿದೆ. ನಮ್ಮ 150 ಸಿಬ್ಬಂದಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ದೇಶದ ಕೆಲವು ವಲಯಗಳಲ್ಲಿ ಉತ್ಪಾದನೆ ಕುಸಿತವಾಗಿದೆ. ವಿಶ್ವದ ಆರ್ಥಿಕತೆ 9 ಟ್ರಿಲಿಯನ್ನಷ್ಟು ಕುಸಿದಿದೆ. ಈ ಸಂದರ್ಭದಲ್ಲೂ ಸಮರ್ಪಕವಾಗಿ ಹಣದ ಹರಿವು ಕಾಪಾಡಿಕೊಂಡಿದ್ದೇವೆ. ಶೇ. 91 ರಷ್ಟು ಎಟಿಎಂಗಳು ಕಾರ್ಯ ನಿರ್ವಹಿಸುತ್ತಿದ್ದು, ಯಾವುದೇ ಬ್ಯಾಂಕಿನಲ್ಲಿ ಹಣದ ಕೊರತೆಯಿಲ್ಲ ಎಂದು ಅವರು ಮಾಹಿತಿ ನೀಡಿದರು.
ಭಾರತದ ಆರ್ಥಿಕ ಪರಿಸ್ಥಿತಿ ಸದ್ಯ 1.9 ರಷ್ಟಿದೆ. ಜಿಡಿಪಿಯ ಶೇ.3.2 ರಷ್ಟು ಹಣವನ್ನು ಬ್ಯಾಂಕ್ಗಳಿಗೆ ನೀಡಿದ್ದೇವೆ. ಶೇ.1.9 ರಷ್ಟು ಜಿಡಿಪಿ ಬೆಳವಣಿಗೆ ದರದ ಮೂಲಕ ಜಿ-20 ರಾಷ್ಟ್ರಗಳ ಪೈಕಿ ಭಾರತ ಅಗ್ರಸ್ಥಾನದಲ್ಲಿದೆ. ಸಣ್ಣ ಮತ್ತು ಮಧ್ಯಮ ಸಂಸ್ಥೆಗಳಿಗೆ RBI, 50 ಸಾವಿರ ಕೋಟಿ ಬಿಡುಗಡೆ ಮಾಡಲು ನಿರ್ಧರಿಸಿದೆ.
- ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (NABARD)ಗೆ 25 ಸಾವಿರ ಕೋಟಿ ರೂ.
- ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB)ಗೆ 10 ಸಾವಿರ ಕೋಟಿ ರೂ.
- ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (SIDBI)ಗೆ 15 ಸಾವಿರ ಕೋಟಿ ರೂ.
ಬಹುಮುಖ್ಯವಾಗಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಪ್ರತಿ ರಾಜ್ಯಗಳಿಗೆ ಶೇ.60 ರಷ್ಟು ಹೆಚ್ಚುವರಿ ಹಣ ನೀಡುವುದಾಗಿ ಕೂಡ ಆರ್ಬಿಐ ಘೋಷಿಸಿದೆ.
ಇತರ ಅಂಶಗಳು:
- ಮಾರ್ಚ್ ನಿಂದ ಮೇ ವರೆಗೆ, ಅಂದರೆ ಮೂರು ತಿಂಗಳವರೆಗೆ ಆಸ್ತಿ ವರ್ಗೀಕರಣ ಸ್ಥಗಿತ
- ಕೋವಿಡ್ -19 ನಿಂದ ಉಂಟಾಗುವ ಹಣಕಾಸಿನ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ್ಗಳು ಯಾವುದೇ ಹೆಚ್ಚಿನ ಲಾಭಾಂಶವನ್ನು ಪಾವತಿಸಬಾರದು
- 2021-22ರಲ್ಲಿ ಭಾರತವು ತೀಕ್ಷ್ಣವಾದ ವಹಿವಾಟು ನಡೆಸುವ ನಿರೀಕ್ಷೆಯಿದೆ
- ಲಾಕ್‌ಡೌನ್ ಸಮಯದಲ್ಲಿ ಇಂಟರ್ನೆಟ್ ಅಥವಾ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಯಾವುದೇ ಸಮಸ್ಯೆಯಿಲ್ಲ, ಬ್ಯಾಂಕಿಂಗ್ ಕಾರ್ಯಾಚರಣೆಗಳು ಎಂದಿನಂತಿರುತ್ತದೆ.
- ಮಾರ್ಚ್‌ನಲ್ಲಿ ಆಟೋ ಮೊಬೈಲ್ ಉತ್ಪಾದನೆ ಹಾಗೂ ಮಾರಾಟದಲ್ಲಿ ತೀವ್ರ ಕುಸಿತವಾಗಿದೆ ಎಂದು ಗವರ್ನರ್ ಮಾಹಿತಿ ನೀಡಿದ್ದಾರೆ.