ನವದೆಹಲಿ : ಹೊಸ ಕೃಷಿ ಕಾನೂನುಗಳನ್ನು 1-1.5 ವರ್ಷಗಳವರೆಗೆ ಸ್ಥಗಿತಗೊಳಿಸುವ ಸರ್ಕಾರದ ಪ್ರಸ್ತಾಪವನ್ನು ಅತ್ಯುತ್ತಮ ಕೊಡುಗೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಮರ್ಥಿಸಿಕೊಂಡಿದ್ದಾರೆ.
41 ಪ್ರತಿಭಟನಾಕಾರ ಕೃಷಿ ಸಂಘಗಳ ನಡುವಿನ ಮಾತುಕತೆಯು 11 ಸುತ್ತಿನ ಚರ್ಚೆಯ ನಂತರವೂ ವಿಫಲವಾಗಿದೆ. ನಾಳೆ ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲು ಮುಂದಾಗಿದ್ದು, ಹಲವು ರಾಜ್ಯಗಳು ರೈತರು ದಿಲ್ಲಿ ಗಡಿಯತ್ತ ದೌಡಾಯಿಸಿದ್ದಾರೆ.
10ನೇ ಸುತ್ತಿನ ಮಾತುಕತೆಯ ಸಂದರ್ಭದಲ್ಲಿ ಸರ್ಕಾರವು ತನ್ನ ಅಹಂನಿಂದ ಕೆಳಗಿಳಿದು ಹೊಸ ಕಾನೂನುಗಳನ್ನು 1ರಿಂದ 1.5 ವರ್ಷಗಳವರೆಗೆ ರದ್ದುಪಡಿಸುವ ಪ್ರಸ್ತಾಪವನ್ನು ರೈತರ ಮುಂದೆ ಇರಿಸಿತ್ತು. ಆದರೆ, ಅದನ್ನು ಒಕ್ಕೂಟಗಳು ತಿರಸ್ಕರಿಸಿದವು.
ಪ್ರತಿಭಟನಾನಿರತ ರೈತ ಸಂಘಗಳು ಶೀಘ್ರದಲ್ಲೇ ಕೇಂದ್ರದ 18 ತಿಂಗಳ ತಾತ್ಕಾಲಿಕ ರದ್ದತಿಯನ್ನು ಮರುಪರಿಶೀಲಿಸಿ ತಮ್ಮ ನಿರ್ಧಾರ ತಿಳಿಸಲಿವೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರು.
ರೈತ ಸಂಘಗಳಿಗೆ ಸರ್ಕಾರ ಅತ್ಯುತ್ತಮವಾದ ಆಫರ್ ನೀಡಿದೆ. ರೈತರು ತಮ್ಮ ನಿರ್ಧಾರವನ್ನು ತಮ್ಮ-ತಮ್ಮ ನಡುವೆ ಚರ್ಚಿಸಿದ ನಂತರ ಅವರೆಲ್ಲ ನಮಗೆ ತಿಳಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರು ಸಂವಹನ ನಡೆಸಿದ ನಂತರ ನಾವು ಅದನ್ನು ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂದು ತೋಮರ್ ತಿಳಿಸಿದರು.
ಇದನ್ನೂ ಓದಿ: 'ಮೇಡ್ ಇನ್ ಅಮೆರಿಕ' ಉತ್ಪನ್ನಗಳ ಉತ್ತೇಜನಕ್ಕೆ ಕಾರ್ಯನಿರ್ವಾಹಕ ಆದೇಶಗಳಿಗೆ ಬೈಡನ್ ಅಂಕಿತ
11ನೇ ಸುತ್ತಿನ ಮಾತುಕತೆಯ ನಂತರ ಹೆಚ್ಚಿನ ಮಾತುಕತೆ ನಡೆಯುವುದಿಲ್ಲ ಎಂದು ಸಚಿವರು ಸೂಚಿಸಿದ್ದರು. ಆದರೆ, ಸರ್ಕಾರವು ನೀಡಿದ ಪ್ರಸ್ತಾಪದ ಕುರಿತು ರೈತರ ಅಂತಿಮ ತೀರ್ಮಾನಕ್ಕೆ ಭೇಟಿ ಮಾಡಲು ಸಿದ್ಧರಿದ್ದಾರೆ.
ಕೃಷಿ ಕಾನೂನುಗಳ ಬಗ್ಗೆ ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಯು ತನ್ನ ಎರಡನೇ ಸುತ್ತಿನ ಸಮಾಲೋಚನೆಗಳನ್ನು ರೈತರು ಮತ್ತು ಕೃಷಿ ಸಂಸ್ಥೆಗಳೊಂದಿಗೆ ಜನವರಿ 27ರಂದು ನಡೆಸಲು ನಿರ್ಧರಿಸಿದೆ.