ನವದೆಹಲಿ: ತೆರಿಗೆ ವಂಚನೆಯ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಭಾರತೀಯ ಅಧಿಕಾರಿಗಳು ಬೈಟ್‌ಡ್ಯಾನ್ಸ್‌ನ ಕನಿಷ್ಠ ಎರಡು ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಿದ್ದಾರೆ.
ತನ್ನ ವಹಿವಾಟಿನ ಕಾರ್ಯಾಚರಣೆಯ ಮೇಲೆ ತೀವ್ರ ಹೊಡೆತ ಬೀಳಬಹುದೆಂಬ ಭಯದಿಂದ ಅಧಿಕಾರಿಗಳ ಖಾತೆ ನಿರ್ಬಂಧ ನಿರ್ದೇಶನ ರದ್ದುಗೊಳಿಸುವಂತೆ ಪ್ರವರ್ತಕರು ನ್ಯಾಯಾಲಯದ ಮೊರೆಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತ ಮತ್ತು ಚೀನಾ ನಡುವಿನ ಗಡಿ ಸಂಘರ್ಷದ ಬಳಿಕ ಕಳೆದ ವರ್ಷ ಜನಪ್ರಿಯ ವಿಡಿಯೋ ಆ್ಯಪ್ ಟಿಕ್ ಟಾಕ್ ಮೇಲೆ ನಿಷೇಧ ಹೇರಲಾಯಿತು. ಜನವರಿಯಲ್ಲಿ ಬೈಟ್ ಡ್ಯಾನ್ಸ್ ತನ್ನ ಭಾರತೀಯ ಉದ್ಯೋಗಿಗಳನ್ನು ಕಡಿತಗೊಳಿಸಿತು.
ಚೀನಾ ಮೂಲದ ಬೈಟ್‌ಡ್ಯಾನ್ಸ್, ನಿಷೇಧಿತ ವಿಡಿಯೋ ಷೇರ್ ಅಪ್ಲಿಕೇಷನ್ ಭಾರತದಲ್ಲಿ ತೆರಿಗೆ ವಂಚನೆ ಆರೋಪ ಎದುರಿಸುತ್ತಿದೆ. ಅಧಿಕಾರಿಗಳು ಕಂಪನಿಯ ಸಿಟಿಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ. ಭಾರತದಲ್ಲಿ ಚೀನಾದ ಕಂಪನಿ ಬೈಟ್‌ಡ್ಯಾನ್ಸ್‌ಗೆ ಇದು ಮತ್ತೊಂದು ಹಿನ್ನಡೆಯಾಗಿದೆ.
ಇದನ್ನೂ ಓದಿ: 12 ತಿಂಗಳಲ್ಲಿ ಶೇ.52ರಷ್ಟು ಭಾರತೀಯ ಸಂಸ್ಥೆಗಳ ಮೇಲೆ ಗಂಭೀರ ಸೈಬರ್ ದಾಳಿ
ಭಾರತೀಯ ಅಧಿಕಾರಿಗಳ ನಿರ್ಧಾರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಬೈಟ್ ಡ್ಯಾನ್ಸ್, ಆದೇಶಗಳನ್ನು ತಕ್ಷಣ ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯವನ್ನು ಸಂಪರ್ಕಿಸಿದೆ ಎಂದು ವರದಿಯಾಗಿದೆ. ಇಂಡೋ-ಚೀನಾ ಗಡಿಯಲ್ಲಿ ಮಿಲಿಟರಿ ಘರ್ಷಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಳೆದ ವರ್ಷ ಜನಪ್ರಿಯ ವಿಡಿಯೋ ಆ್ಯಪ್ 'ಟಿಕ್ ಟಾಕ್' ಅನ್ನು ನಿಷೇಧಿಸಿತ್ತು.
ನಿಷೇಧವನ್ನು ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದ್ದರಿಂದ ಬೈಟ್‌ಡ್ಯಾನ್ಸ್ ಭಾರತದಲ್ಲಿ ತನ್ನ ಸಿಬ್ಬಂದಿಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಕಂಪನಿಯು ಪ್ರಸ್ತುತ ದೇಶದಲ್ಲಿ 1,300 ಜನರನ್ನು ನೇಮಿಸಿಕೊಂಡಿದೆ. ಇವರೆಲ್ಲರೂ ಬೈಟ್ ಡ್ಯಾನ್ಸ್ ವಿದೇಶಿ ವ್ಯವಹಾರ ಚಟುವಟಿಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.