ನವದೆಹಲಿ: ಭಾರ್ತಿ ಏರ್‌ಟೆಲ್‌ನಲ್ಲಿ ವಿದೇಶಿ ನೇರ ಹೂಡಿಕೆಗೆ ಈ ಮೊದಲು ಅನುಮತಿಸಿದ ಶೇ 49 ರಿಂದ ಶೇ 100ಕ್ಕೆ ಹೆಚ್ಚಿಸಲು ಟೆಲಿಕಾಂ ಇಲಾಖೆ (ಡಿಒಟಿ) ಅನುಮೋದನೆ ನೀಡಿದೆ ಎಂದು ಕಂಪನಿಯ ಷೇರು ವಿನಿಮಯ ಫೈಲಿಂಗ್ನಲ್ಲಿ ತಿಳಿಸಲಾಗಿದೆ.
ಕಂಪನಿಯು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಅನುಮೋದನೆಯನ್ನು ಸಹ ಪಡೆದಿದೆ. ಇದು ವಿದೇಶಿ ಹೂಡಿಕೆದಾರರಿಗೆ ಕಂಪನಿಯಲ್ಲಿ ಶೇ 74ರಷ್ಟು ಪಾಲನ್ನು ಹೊಂದಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದೆ.
ಭಾರ್ತಿ ಏರ್‌ಟೆಲ್ ಲಿಮಿಟೆಡ್ 2020ರ ಜನವರಿ 20ರಂದು ದೂರಸಂಪರ್ಕ ಇಲಾಖೆ (ಡಿಒಟಿ) ಬರೆದ ಪತ್ರದಿಂದ ಅನುಮೋದನೆ ಪಡೆದಿದೆ. ವಿದೇಶಿ ಹೂಡಿಕೆಯ ಮಿತಿಯನ್ನು ಕಂಪನಿಯ ಪಾವತಿಸಿದ ಬಂಡವಾಳದ ಶೇ 100ರವರೆಗೆ ಹೆಚ್ಚಿಸಿದ್ದಕ್ಕಾಗಿ ಈ ಪತ್ರ ಪಡೆದಿದೆ ಎಂದು ಫೈಲಿಂಗ್ ನಲ್ಲಿ ಹೇಳಲಾಗಿದೆ.
ಕಂಪನಿಯು ಸುಮಾರು 35,586 ಕೋಟಿ ರೂ. ಶಾಸನಬದ್ಧ ಹೊಣೆಗಾರಿಕೆ ಪಾವತಿಸಬೇಕಿದೆ. ಇದರಲ್ಲಿ 21,682 ಕೋಟಿ ರೂ. ಪರವಾನಗಿ ಶುಲ್ಕ ಮತ್ತು 13,904.01 ಕೋಟಿ ರೂ. ತರಂಗಾಂತರ ಬಾಕಿ ಉಳಿಸಿಕೊಂಡಿದೆ.