ನವದೆಹಲಿ: ಭಾರತದಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳಿಗೆ ವಿಮಾ ಪಾಲಿಸಿ ಸೇವೆ ಒದಗಿಸುವ ಅಕೋ ಜನರಲ್ ಇನ್ಶುರೆನ್ಸ್ ಲಿಮಿಟೆಡ್ ಜೊತೆಗೆ ಇ-ಕಾಮರ್ಸ್ ದೈತ್ಯ ಅಮೆಜಾನ್ ಪೇ ಒಪ್ಪಂದ ಮಾಡಿಕೊಂಡಿದೆ.
ಅಮೆಜಾನ್ ಇಂಡಿಯಾದ ಪಾವತಿ ಪ್ಲಾಟ್ಫಾರ್ಮ್ ಆಗಿರುವ ಅಮೆಜಾನ್ ಪೇ, ತನ್ನ ಗ್ರಾಹಕರಿಗೆ ವಿಮೆ ಖರೀದಿಗೆ ನೆರವಾಗಲು ಮತ್ತು ಅಮೆಜಾನ್ ಪ್ರೈಮ್ ಸದಸ್ಯರು ಹೆಚ್ಚುವರಿ ರಿಯಾಯಿತಿಗಳನ್ನು ನೀಡಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರಾಹಕರು ಅಮೆಜಾನ್ ಪೇ ಪೇಜ್, ಅಮೆಜಾನ್ ಆ್ಯಪ್ ಅಥವಾ ಮೊಬೈಲ್ ವೆಬ್‌ಸೈಟ್‌ನಿಂದ ವಾಹನ ವಿಮೆ ಖರೀದಿಸಬಹುದು. ಮೂಲಕ ದಾಖಲಾತಿಗಳನ್ನು ನೀಡಿ ತಮ್ಮ ಕಾರು ಅಥವಾ ಬೈಕ್‌ನ ವಿಮೆ ಅಪ್ಡೇಟ್ ಪಡೆಯಬಹುದು ಎಂದು ಹೇಳಿದೆ.
ತ್ವರಿತ ವಿಮಾ ಯೋಜನೆಯಲ್ಲಿ ಗ್ರಾಹಕರು ಶೂನ್ಯ ಕಾಗದಪತ್ರ, ಒನ್ ಅವರ್ ಪಿಕ್ ಅಪ್ ಮತ್ತು ಮೂರು ದಿನಗಳ ಅಸ್ಯೂರ್ಡ್ ಕ್ಲೈಮ್ ಸರ್ವೀಸ್ ಮತ್ತು ಆಯ್ದ ನಗರಗಳಲ್ಲಿ ಒಂದು ವರ್ಷದ ದುರಸ್ತಿ ಖಾತರಿ ಪಡೆಯಬಹುದು. ಅಮೆಜಾನ್ ಪೇ ಬ್ಯಾಲೆನ್ಸ್, ಯುಪಿಐ ಅಥವಾ ಕಾರ್ಡ್ ಬಳಸಿಕೊಂಡು ವಿಮಾ ಪಾವತಿ ಸಹ ಮಾಡಬಹುದು ಎಂದು ತಿಳಿಸಿದೆ.