ನವದೆಹಲಿ: ಭಾರತ-ಅಮೆರಿಕ ನಡುವಿನ ರಕ್ಷಣಾ ಸಹಕಾರ ಒಪ್ಪಂದಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ವೇದಿಕೆಯಾಗಿದೆ. 'ಅಮೆರಿಕದಿಂದ ಅತ್ಯಾಧುನಿಕ ಮಿಲಿಟರಿ ಸಾಧನಗಳಾದ ಅಪಾಚೆ ಮತ್ತು ಎಂಹೆಚ್ 60 ರೋಮಿಯೋ ಹೆಲಿಕಾಪ್ಟರ್ ಖರೀದಿಯಂತಹ 3 ಬಿಲಿಯನ್ ಡಾಲರ್ ( ₹ 21,560 ಕೋಟಿ) ಮಿಲಿಟರಿ ಒಪ್ಪಂದ ಕುದುರಿದೆ.
ಈ ಒಪ್ಪಂದಗಳು ಉಭಯ ದೇಶಗಳ ನಡುವಿನ ಜಂಟಿ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.
3 ಬಿಲಿಯನ್ ಡಾಲರ್ಗೂ ಅಧಿಕ ಮೊತ್ತದ ಒಪ್ಪಂದದಡಿ ಸುಧಾರಿತ ಅಮೆರಿಕದ ಮಿಲಿಟರಿ ಉಪಕರಣಗಳನ್ನು ಖರೀದಿಸುವ ಮೂಲಕ ನಮ್ಮ ರಕ್ಷಣಾ ಸಹಕಾರವನ್ನು ವಿಸ್ತರಿಸಿದ್ದೇವೆ. ರೋಮಿಯೋ ಹೆಲಿಕಾಪ್ಟರ್‌ಗಳು ವಿಶ್ವದಲ್ಲೇ ಅತ್ಯುತ್ತಮವಾದ ಮಿಲಿಟರಿ ಸಾಧನಗಳು. ಇವು ನಮ್ಮ ಜಂಟಿ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ ಎಂದು ಅಮೆರಿಕ-ಭಾರತ ನಿಯೋಗ ಮಟ್ಟದ ಮಾತುಕತೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಜಂಟಿ ಸಮಾವೇಶದಲ್ಲಿ ಟ್ರಂಪ್ ಹೇಳಿದರು.
ಅಪಾಚೆ ಇದ್ದರೇ ಆನೆ ಬಲ:
ಎಂತಹದ್ದೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲ ಕಾಂಬ್ಯಾಟ್ ಹೆಲಿಕಾಪ್ಟರ್ ಅಪಾಚೆ ಹೊಂದಿದ್ದು, ಜಂಟಿ ಡಿಜಿಟಲ್ ಕಾರ್ಯಾಚರಣೆಯ ಸೌಲಭ್ಯವನ್ನು ಸಹ ಒಳಗೊಂಡಿದೆ. ಇದನ್ನು ವಿಂಗ್ ಕಮಾಂಡರ್ಗಳ ಅವಶ್ಯಕತೆಗೆ ತಕ್ಕಂತೆ ತಯಾರಿಸಲಾಗಿದೆ. ಯಾವುದೇ ಭೌಗೋಳಿಕ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಬಹುದಾಗಿದೆ. ವಿಶೇಷ ಲ್ಯಾಂಡಿಂಗ್ ಗೇರ್ ವ್ಯವಸ್ಥೆ ಹೊಂದಿದ್ದು, ಕಾಕ್ಪಿಟ್ನಲ್ಲಿ ಇಬ್ಬರು ಕುಳಿತುಕೊಳ್ಳುವ ವ್ಯವಸ್ಥೆ ಇದೆ. 58.17 ಅಡಿ ಉದ್ದ, 12.7 ಎತ್ತರ ಹೊಂದಿದೆ. ಗಂಟೆಗೆ 365 ಕಿ.ಮೀ. ವೇಗವಾಗಿ ಮತ್ತು 2,500 ಅಡಿ ಮೇಲಕ್ಕೆ ಹಾರುವ ಸಾಮರ್ಥ್ಯವಿದೆ. 30 ಎಂಎಂ ಚೈನ್ ಗನ್, ಎಐಎಂ-92 ಕ್ಷಿಪಣಿ, ಹೈಡ್ರಾ 70 ಎಂಎಂ ರಾಕೆಟ್ ಮತ್ತು ಸ್ಪೈಕ್ ಕ್ಷಿಪಣೆ ಹೊತ್ತೊಯ್ಯುವ ಸಾಮರ್ಥ್ಯ ಇದಕ್ಕಿದೆ.