ನವದೆಹಲಿ: ಕೊರೊನಾ ವೈರಸ್ ಸೃಷ್ಟಿಸಿರುವ ಈ ಪರಿಸ್ಥಿತಿಯಲ್ಲಿ ದೇಶದ ಆರ್ಥಿಕ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ಹಣಗಳಿಕೆ ಮಾರ್ಗದ ಮೂಲಕ ಹಣಕಾಸಿನ ಕೊರತೆ ನಿಭಾಯಿಸಲು ಸೂಕ್ತ ಮಾರ್ಗದಲ್ಲಿ ಹೋಗಬೇಕು ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಸಲಹೆ ನೀಡಿದ್ದಾರೆ.
ಆರ್ಥಿಕತೆಯ ಮೇಲೆ ಕೊರೊನಾ ವೈರಸ್ ಪ್ರಭಾವವನ್ನು ಎದುರಿಸಲು ಸರ್ಕಾರ ಸಂಪನ್ಮೂಲಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದೆ. 2020-21ರಲ್ಲಿ ಮಾರುಕಟ್ಟೆ ಸಾಲವನ್ನು ಶೇ. 54 ರಷ್ಟು ಹೆಚ್ಚಿಸಿ, 12 ಲಕ್ಷ ಕೋಟಿ ರೂ.ಗೆ ಏರಿಸಲು ಹಣಕಾಸು ಸಚಿವಾಲಯ ಶುಕ್ರವಾರ ನಿರ್ಧರಿಸಿದೆ. ಇದು ಅಂದಾಜು 7.8 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು.
ಸರ್ಕಾರವು ಆರ್ಥಿಕತೆಯ ಆರೋಗ್ಯವನ್ನು ಕಾಪಾಡುವ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಅಗತ್ಯವಿರುವುದಕ್ಕೆ ಖರ್ಚು ಮಾಡಬೇಕು ಎಂದು ರಾಜನ್ ಬ್ಲಾಗ್ನಲ್ಲಿ ತಿಳಿಸಿದ್ದಾರೆ. ಅಲ್ಲದೆ ಖರ್ಚಿನ ಕಡೆ ಗಮನ ನೀಡಿ, ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಲು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ.
ಸರ್ಕಾರವು ಹಣಕಾಸಿನ ಕೊರತೆ ಮತ್ತು ಅದರ ಸಾಲವನ್ನು ಮಧ್ಯಮ ಅವಧಿಗೆ ಹಿಂದಿರುಗಿಸುವ ಬಗ್ಗೆ ಚಿಂತಿಸಬೇಕು. ಈಗ ಹೆಚ್ಚು ಖರ್ಚು ಮಾಡಿದರೆ ಮುಂದಿನ ದಿನಗಳಲ್ಲಿ ಕಷ್ಟವಾಗುತ್ತದೆ ಎಂದು ರಾಜನ್ ಸರ್ಕಾರವನ್ನು ಎಚ್ಚರಿಸಿದ್ದಾರೆ.