ನವದೆಹಲಿ: ಭೂಸ್ವಾಧೀನ, ಅರಣ್ಯ ಮತ್ತು ವನ್ಯಜೀವಿ ಅನುಮತಿಗಳಿಂದ ಹಿಡಿದು ಗುತ್ತಿಗೆದಾರರ ಕಳಪೆ ಕಾಮಗಾರಿಗಳಂತಹ ನಾನಾ ಸಮಸ್ಯೆಗಳಿಂದ 566 ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿ ಮಾತನಾಡಿದ ಅವರು, ಸುವರ್ಣ ಚತುರ್ಭುಜ ನಿರ್ಮಾಣ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಆದರೂ 566 ಯೋಜನೆಗಳ ಕಾಮಗಾರಿಗಳು ಪೂರ್ಣಗೊಳ್ಳದೇ ಅಪೂರ್ಣವಾಗಿವೆ. ಈ ಯೋಜನೆಗಳು ಮುಖ್ಯವಾಗಿ ಭೂಸ್ವಾಧೀನ, ವರ್ಗಾವಣೆ, ಮಣ್ಣಿನ ಅಲಭ್ಯತೆ, ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದ ವಿಳಂಬವಾಗುತ್ತವೆ ಎಂದರು.
ಸಂಸತ್ತಿನಲ್ಲಿ ಸಚಿವರ ಬಹಿರಂಗಪಡಿಸಿರುವ ದೇಶದ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಗಳ ದೊಡ್ಡ ಹಿನ್ನಡೆಯು ನಿಧಾನಗತಿಯ ಆರ್ಥಿಕತೆಯ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಲಿದೆ. ಈ ಹಿಂದೆ ರಸ್ತೆ ಅಭಿವೃದ್ಧಿ ಯೋಜನೆಗಳ ಯಶಸ್ಸು ಆಡಳಿತ ಪಕ್ಷದ ಸಚಿವರಿಗೆ ಹೆಮ್ಮಯ ಸಂಗತಿ ಆಗುತ್ತಿತ್ತು. ಆದರೆ, ಯೋಜನೆಗಳ ಹಿನ್ನಡೆಯು ಸರ್ಕಾರಕ್ಕೆ ಮುಜುಗರ ತರಿಸುವಂತಿದೆ.
ಕಳಪೆ ಕಾಮಗಾರಿ ನಡೆಸುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಒಪ್ಪಂದದ ನಿಬಂಧನೆಗಳ ಅಡಿ ವಿಳಂಬ ಕುರಿತು ವರದಿ ತರಿಸಿಕೊಳ್ಳಲಾಗುತ್ತಿದೆ. ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಭೂಸ್ವಾಧೀನ ಮತ್ತು ಪರಿಸರ ಅನುಮತಿಗಳನ್ನು ವ್ಯವಸ್ಥಿತಗೊಳಿಸಲಾಗುತ್ತಿದೆ. ಇತರ ಸಚಿವಾಲಯಗಳೊಂದಿಗೆ ನಿಕಟ ಹೊಂದಾಣಿಕೆ ನಡೆಸಲಾಗುತ್ತಿದ ಎಂದು ಸಚಿವರು ಹೇಳಿದರು.
ವಿಳಂಬವಾದ ಯೋಜನೆಗಳನ್ನು ತ್ವರಿತಗೊಳಿಸಲು ಯೋಜನಾ ಇಂಜಿನಿಯರ್, ರಾಜ್ಯ ಸರ್ಕಾರಗಳು ಮತ್ತು ಗುತ್ತಿಗೆದಾರರೊಂದಿಗೆ ನಿಯಮಿತವಾಗಿ ಸಭೆ ನಡೆಸಲಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಗಡ್ಕರಿ ಭರವಸೆ ನೀಡಿದರು.