ಮಂಡ್ಯ: ನಾಗಮಂಗಲ ತಾಲೂಕಿನ 'ಅದೃಷ್ಟದ ಹಳ್ಳಿ' ಅಂತ ಅಲಪಹಳ್ಳಿಗೆ ಮಾತಿದೆ. ಅದೃಷ್ಟ ಮಾಡಿದ್ದ ಅಲಪಹಳ್ಳಿ ಎಂಬುದು ನಾಣ್ನುಡಿ. ಈ ಮಾತು ಯಾಕೆ ಬಂತು ಅಂದರೆ, ಲೋಕಪಾವನಿ ನದಿಯ ಹರಿವು ಇಲ್ಲಿನ ರೈತರಿಗೆ ವರದಾನವಾಗಿತ್ತು. ರೈತರು ಈ ನದಿಯನ್ನೇ ನಂಬಿ ಶತಮಾನಗಳಿಂದಲೂ ಇಲ್ಲಿ ಭತ್ತದ ಬೆಳೆ ಬೆಳೆಯುತ್ತಿದ್ದರಂತೆ. ಆದರೀಗ ಆಗಿರುವುದೇ ಬೇರೆ. ಈ ಗ್ರಾಮದ ಜನ ಭತ್ತ ಬೆಳೆದು ಇದೀಗ ದಶಕಗಳೇ ಕಳೆದು ಹೋಗಿವೆ.
ಲೋಕಪಾವನಿ ನದಿಪಾತ್ರದ ಗ್ರಾಮಗಳಾದ ಕೆಮ್ಮನಹಳ್ಳಿ, ಗಂಗನಹಳ್ಳಿ, ಜೋಡಿ ಹೊಸೂರು, ಉಯ್ಯನಹಳ್ಳಿ, ಮಂಚಿ ಪಟ್ಟಣ, ಕರಿ ಕ್ಯಾತನಹಳ್ಳಿ, ಮಾದಹಳ್ಳಿ, ಹೊಣಕೆರೆ ಹಾಗೂ ಕಾವಡಿ ಹಳ್ಳಿ ಸೇರಿದಂತೆ ನದಿ ಮುಖಜ ಭೂಮಿಯ ಇನ್ನೂ ಹಲವು ಹಳ್ಳಿಯ ರೈತರು ಮಳೆಗಾಲ ಬಂತೂ ಅಂದರೆ ಭತ್ತ ಬೆಳೆಯುತ್ತಿದ್ದರು. ಕೆಆರ್ ಎಸ್ ಅಣೆಕಟ್ಟೆ ಕಟ್ಟುವುದಕ್ಕೂ ಮೊದಲೇ ಭತ್ತ ಬೆಳೆಯುತ್ತಿದ್ದ ಪ್ರದೇಶವಿದು.
ಆದರೆ, ಈಗ ಭತ್ತ ಇರಲಿ ರಾಗಿಯನ್ನೂ ಬೆಳೆಯಲು ಸಾಧ್ಯವಾಗದೇ ರೈತರು ಕಂಗಾಲಾಗಿದ್ದಾರೆ. ಇದಕ್ಕೆ ಕಾರಣ ಬತ್ತಿ ಹೋಗಿರುವ ಲೋಕಪಾವನಿ. ಲೋಕಪಾವನಿಯ ಉಗಮ ಸ್ಥಾನ ಅಲಪಹಳ್ಳಿಯ ಹುಚ್ಚು ಕೆರೆ. ಇದು ಸುಮಾರು 750 ಎಕರೆ ವಿಸ್ತೀರ್ಣ ಹೊಂದಿದೆ. ಈ ಕೆರೆ ತುಂಬಿದರೆ ಸಾಕು ಭತ್ತದ ಪೈರು ನಳನಳಿಸುತ್ತಿತ್ತು. ಆದ್ರೀಗ ಬೆಳೆ ಕಂಡು 12 ವರ್ಷಕ್ಕೂ ಹೆಚ್ಚು ಕಾಲವೇ ಕಳೆದುಹೋಗಿದೆ. ಧರ್ಮಸಿಂಗ್ ಸಿಎಂ ಆದ ಸಂದರ್ಭದಲ್ಲಿ ಮಾತ್ರ ಲೋಕಪಾವನಿ ಉಕ್ಕಿ ಹರಿದಿದ್ದಳಂತೆ. ಆದರೆ ಅಲ್ಲಿಂದ ಇಲ್ಲಿವರೆಗೂ ಹರಿಯುವುದು ಇರಲಿ, ನದಿಯಲ್ಲಿ ನೀರಿನ ಸೆಲೆಯೂ ಇಲ್ಲವಾಗಿದೆ.