ಬೆಂಗಳೂರು: "ನೀವಾಗಿಯೇ ಬೆಳ್ಳಿ ಪದಕ ಗೆಲ್ಲಲ್ಲ, ಆದರೆ ಚಿನ್ನದ ಪದಕ ಸೋತಿದ್ದರಿಂದ ಅದು ಸಿಗುತ್ತೆ" ಆಟದಲ್ಲಿ ಹೀಗೊಂದು ಹಳೆಯ ಗಾದೆ ಮಾತಿದೆ. ಈ ಗಾದೆಯ ಜಾಡಿನಲ್ಲೇ ಸಾಗುತ್ತಿರುವ ಮುಂಬೈ ತಂಡ ರಣಜಿ ಟ್ರೋಫಿ ಕಿರೀಟ ಮುಡಿಗೇರಿಸಿಕೊಳ್ಳಲು ಹವಣಿಸುತ್ತಿದೆ. ಪ್ರತಿಷ್ಠಿತ ಟೂರ್ನಿಯ ಫೈನಲ್ನಲ್ಲಿ ತನ್ನ ಎದುರಾಳಿ ಮಧ್ಯಪ್ರದೇಶ ಮಣಿಸಲು ಮುಂಬೈ ಸಜ್ಜಾಗಿದೆ.
ಇದೇ ಬುಧವಾರದಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ಹಣಾಹಣಿ ನಡೆಯಲಿದೆ. 23 ವರ್ಷಗಳ ಬಳಿಕ ಮಧ್ಯಪ್ರದೇಶ ಪ್ರಶಸ್ತಿ ಸುತ್ತು ತಲುಪಿದ್ದರೆ, ಮುಂಬೈ ನಿರ್ಣಾಯಕ ಘಟ್ಟಕ್ಕೆ ಹಲವು ಬಾರಿ ಬಂದಿದೆ. ಮಧ್ಯಪ್ರದೇಶ ತಂಡವನ್ನು ಸೋಲಿಸಿ ಮತ್ತೆ ಚಾಂಪಿಯನ್ ಪಟ್ಟ ಗಿಟ್ಟಿಸಲು ಮುಂಬೈ ಸಿದ್ಧತೆ ನಡೆಸಿದೆ.
ಮಧ್ಯಪ್ರದೇಶ ಕೋಚ್ ಚಂದ್ರಕಾಂತ್ ಪಂಡಿತ್ ಸಹ ಈ ಬಾರಿ ಚಾಂಪಿಯನ್ ಆಗಿಯೇ ತವರಿಗೆ ಮರಳುವುದು ಎಂದು ಪಣ ತೊಟ್ಟಿದ್ದಾರೆ. ಪಂದ್ಯಾವಳಿ ಆರಂಭವಾದಾಗಿನಿಂದಲೂ ಗೆಲ್ಲುವ ಕುದುರೆಯಾಗಿ ಮುನ್ನುಗ್ಗುತ್ತಿರುವ ಕೋಚ್ ಅಮೋಲ್ ಮಜುಂದಾರ್ ಗರಡಿಯಲ್ಲಿ ಪಳಗಿರುವ ಮುಂಬೈ ನಾಳೆಯಿಂದ ತನ್ನ ಅತ್ಯುತ್ತಮ ಯುವಪಡೆಯನ್ನು ಕಣಕ್ಕಿಳಿಸಲಿದೆ.
ಈ ಸಾಲಿನ ರಣಜಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಸರ್ಫರಾಜ್ ಖಾನ್ 5 ಪಂದ್ಯಗಳಲ್ಲಿ 800 ಕ್ಕೂ ಅಧಿಕ ರನ್ ಪೇರಿಸಿ ಗಮನ ಸೆಳೆದಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡಿದ್ದ ಯಶಸ್ವಿ ಜೈಸ್ವಾಲ್ 4 ಇನ್ನಿಂಗ್ಸ್ ಮೂಲಕ 3 ಶತಕ ಬಾರಿಸಿ ರನ್ ಮಶಿನ್ ಎನಿಸಿದ್ದಾರೆ. ಪೃಥ್ವಿ ಶಾ, ಅರ್ಮಾನ್ ಜಾಫರ್ ಕೂಡ ಒಳ್ಳೆಯ ಫಾರ್ಮ್ನಲ್ಲಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್ ಪ್ರವಾಸದಿಂದ ಆರ್ ಅಶ್ವಿನ್ ಔಟ್..?