ಬೆಂಗಳೂರು: ಕಳೆದ ಒಂದು ತಿಂಗಳಿಂದ ವಿಧಿಸಿರುವ ಲಾಕ್ಡೌನ್ ಪರಿಣಾಮವಾಗಿ ಅನೇಕ ಕೈಗಾರಿಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಕೈಗಾರಿಕೆಗಳಿಂದ ಇತರೆ ರಾಜ್ಯಗಳಿಗೆ ರಫ್ತಾಗುತ್ತಿದ್ದ ವಸ್ತುಗಳು ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಇಂತಹ ಕೈಗಾರಿಕೆಗಳಿಗೆ ಲಾಕ್ಡೌನ್ನಿಂದ ವಿನಾಯಿತಿ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್ ಈಟಿವಿ ಭಾರತಕ್ಕೆ ಹೇಳಿದರು.
ತಮಿಳುನಾಡು ಹಾಗೂ ಆಂಧ್ರಪ್ರದೇಶ- ತೆಲಂಗಾಣ ರಾಜ್ಯಗಳಲ್ಲಿನ ಅನೇಕ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಅನೇಕ ಆರ್ಡರ್ಗಳು ಈ ರಾಜ್ಯಗಳ ಕೈಗಾರಿಕೆಗಳಿಗೆ ಹೋಗುತ್ತಿವೆ. ಎಫ್ಕೆಸಿಸಿಐ, ಕಾಸಿಯಾ ಸೇರಿದಂತೆ ಇನ್ನಿತರೆ ಕೈಗಾರಿಕಾ ಸಂಘಗಳು ಆತಂಕ ವ್ಯಕ್ತಪಡಿಸಿ ಮುಖ್ಯಮಂತ್ರಿಗೆ ಪತ್ರವನ್ನ ಬರೆದಿದೆ. ಜೊತೆಗೆ ಕೈಗಾರಿಕಾ ಸಚಿವ ಶೆಟ್ಟರ್ ಕೂಡ ಮುಖ್ಯಮಂತ್ರಿ ಬಿಎಸ್ವೈಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಭಾರತದ ಅನೇಕ ರಾಜ್ಯಗಳು ಲಾಕ್ಡೌನ್ ಪರಿಸ್ಥಿತಿಯಲ್ಲಿದೆ. ಆದರೆ ಇತರೆ ರಾಷ್ಟ್ರಗಳು ಎಂದಿನಂತೆ ವ್ಯಾಪಾರ ವಹಿವಾಟು ನಡೆಸುತ್ತಿದೆ. ಈ ಕಾರಣಕ್ಕೆ ರಫ್ತು ಮಾಡುವ ಅಗತ್ಯತೆ ಬಗ್ಗೆ ಸರ್ಕಾರ ಗಮನ ಹರಿಸಿದ್ದು, ಸೋಮವಾರ ಕೈಗಾರಿಕೆಗಳಿಗೆ ಲಾಕ್ಡೌನ್ನಿಂದ ಕೆಲ ವಿನಾಯಿತಿ ನೀಡುವ ಸಾಧ್ಯತೆ ಬಗ್ಗೆ ಮೂಲಗಳು ತಿಳಿಸಿವೆ.
ಆರ್ಥಿಕ ಪರಿಸ್ಥಿತಿ ಈಗಾಲೇ ಕುಸಿದಿದ್ದು, ಕೈಗಾರಿಕೆಗಳ ನೌಕರರಿಗೆ ವೇತನ ನೀಡಲು ಆಗುತ್ತಿಲ್ಲ. ಈ ಕಾರಣದಿಂದ ಕೈಗಾರಿಕೆಗಳಿಗೆ ವಿನಾಯಿತಿ ನೀಡಬೇಕು ಎಂದು ಎಫ್ಕೆಸಿಸಿಐ ಅಧ್ಯಕ್ಷ ಪೆರಿಕಲ್ ಸುಂದರ್ ಹೇಳಿದರು.
ಕೇವಲ ರಫ್ತು ಮಾಡುವ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಇಂತಹ ಕೈಗಾರಿಕೆಗಳಿಗೆ ಬೇಕಾದ ಹಲವಾರು ಉಪಕರಣಗಳನ್ನ ಇತರ ಕೈಗಾರಿಕೆಗಳು ಒದಗಿಸಬೇಕಾಗುತ್ತದೆ. ಸರ್ಕಾರ ಹೇಳುವ ಎಲ್ಲ ಕೋವಿಡ್ 19 ಮುಂಜಾಗೃತಾ ಕ್ರಮಗಳನ್ನ ಕೈಗಾರಿಕೆಗಳು ಪಾಲಿಸಿ ಆರ್ಥಿಕ ಸ್ಥಿತಿ ಸುಧಾರಣೆ ಮಾಡಲು ಅನುವು ಮಾಡಬೇಕು ಎಂದು ಸುಂದರ್ ಮನವಿ ಮಾಡಿದ್ದಾರೆ.