ವಿಜಯಪುರ: ಭೀಮಾತೀರದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿರುವ ಇಂಡಿ ಎಸಿ ನೇತ್ವತೃದ ತಂಡ 629 ಕ್ಯೂಬಿಕ್ ಮೀಟರ್ ಅಕ್ರಮ ಮರಳು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಏಕಕಾಲದಲ್ಲಿ ಎರಡು ಗ್ರಾಮದ ಮೇಲೆ ದಾಳಿ ನಡೆಸಲಾಗಿದೆ.
ಇಂಡಿ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ ನೇತೃತ್ವದಲ್ಲಿ ತಹಶೀಲ್ದಾರ್, ಪೋಲಿಸ್ ಇಲಾಖೆ ಅಧಿಕಾರಿಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡ ಸಿಂದಗಿ ತಾಲೂಕಿನ ದೇವಣಗಾಂವ ಮತ್ತು ಶಂಭೆವಾಡ ಗ್ರಾಮ ವ್ಯಾಪ್ತಿಯ ಭೀಮಾನದಿ ಪಾತ್ರದಲ್ಲಿ ಅನಿರೀಕ್ಷಿತವಾಗಿ ದಾಳಿ ನಡೆಸಿದೆ. ಈ ವೇಳೆ 629 ಕ್ಯೂಬಿಕ್ ಮೀಟರ್ ಅನಧಿಕೃತ ಮರಳನ್ನು ವಶಕ್ಕೆ ಪಡೆದಿದೆ.
ಎರಡು ಕಡೆ ಈ ದಾಳಿ ನಡೆಸಲಾಗಿದ್ದು, ದೇವಣಗಾಂವ ಗ್ರಾಮದ ಎರಡು ಸ್ಥಳಗಳಲ್ಲಿ 294 ಕ್ಯೂಬಿಕ್ ಮೀಟರ್ ಹಾಗೂ ಶಂಭೇವಾಡ ಗ್ರಾಮದ ಎರಡು ಸ್ಥಳಗಳಲ್ಲಿ 335 ಕ್ಯೂಬಿಕ್ ಮೀಟರ್ಗಳಂತೆ ಒಟ್ಟು 629 ಕ್ಯೂಬಿಕ್ ಮೀಟರ್ ಮರಳನ್ನು ವಶಕ್ಕೆ ಪಡೆಯಲಾಗಿದೆ.
ಸದ್ಯ ವಶಪಡಿಸಿಕೊಂಡ ಅಕ್ರಮ ಮರಳು ಅಂದಾಜು 5,31,505 ಲಕ್ಷ ರೂ. ಎನ್ನಲಾಗಿದೆ. ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸಿ ರಾಹುಲ್ ಶಿಂಧೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.