ಲಖನೌ( ಉತ್ತರ ಪ್ರದೇಶ): ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರಾಜ್ಯಾದ್ಯಂತ ಧಾರ್ಮಿಕ ಸ್ಥಳಗಳಲ್ಲಿ ಕಾನೂನು ಬಾಹಿರವಾಗಿ ಅಳವಡಿಸಲಾಗಿರುವ ಧ್ವನಿವರ್ಧಕಗಳನ್ನು ತೆಗೆದುಹಾಕಲು ಯೋಗಿ ಸರ್ಕಾರ ಆದೇಶ ನೀಡಿದೆ. ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ವಿವಾದ ಸೃಷ್ಟಿಯಾಗುತ್ತಿರುವ ಮಧ್ಯೆ ಈ ಆದೇಶ ಮಹತ್ವ ಪಡೆದುಕೊಂಡಿದೆ.
ಕಳೆದ ವಾರವಷ್ಟೇ ಸಿಎಂ ಯೋಗಿ ಆದಿತ್ಯನಾಥ್ ಅವರು ವಸತಿ ಪ್ರದೇಶಗಳಲ್ಲಿರುವ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಶಬ್ದಕ್ಕೆ ಮಿತಿ ಹೇರಲು ನಿರ್ದೇಶನ ನೀಡಿದ್ದರು. ಈ ಕುರಿತು ಮಾಹಿತಿ ನೀಡಿರುವ ರಾಜ್ಯದ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ಥಿ, ರಾಜ್ಯದ ಧಾರ್ಮಿಕ ಸ್ಥಳಗಳಿಂದ ಅಕ್ರಮ ಧ್ವನಿವರ್ಧಕಗಳನ್ನು ತೆಗೆದುಹಾಕಲು ಶನಿವಾರ ಆದೇಶ ಹೊರಡಿಸಲಾಗಿದೆ. ಈ ಸಂಬಂಧ ಏಪ್ರಿಲ್ 30ರೊಳಗೆ ವರದಿಯನ್ನು ಜಿಲ್ಲೆಗಳಿಂದ ಕೋರಲಾಗಿದೆ. ರಾಜ್ಯದಲ್ಲಿ ಶಬ್ದದ ಮಿತಿ ಉಲ್ಲಂಘಿಸುವ ಧಾರ್ಮಿಕ ಸ್ಥಳಗಳನ್ನು ಪಟ್ಟಿ ಮಾಡಲು ಸ್ಥಳೀಯ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ.
ಧಾರ್ಮಿಕ ಮುಖಂಡರೊಂದಿಗೆ ಈ ಕೂಡಲೇ ಮಾತುಕತೆ ನಡೆಸಲು ಮತ್ತು ಅನಧಿಕೃತ ಧ್ವನಿವರ್ಧಕಗಳನ್ನು ತೆಗೆದು ಹಾಕಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಈವರೆಗೆ 125 ಧ್ವನಿವರ್ಧಕಗಳನ್ನು ಕೆಳಗಿಳಿಸಲಾಗಿದೆ ಮತ್ತು ಸುಮಾರು 17,000 ಸ್ಥಳಗಳಲ್ಲಿ ಧ್ವನಿವರ್ಧಕಗಳ ಶಬ್ದವನ್ನು ಕಡಿಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಯಾವುದೇ ರೀತಿಯ ಧಾರ್ಮಿಕ ಮೆರವಣಿಗೆಗಳಲ್ಲಿ ಧ್ವನಿವರ್ಧಕಗಳ ಬಳಕೆಯಿಂದ ಇತರರಿಗೆ ಅನಾನುಕೂಲವಾಗಬಾರದು. ಮೈಕ್ರೊಫೋನ್‌ಗಳನ್ನು ಬಳಸಬಹುದಾದರೂ, ಧಾರ್ಮಿಕ ಸ್ಥಳದ ಆವರಣದಿಂದ ಧ್ವನಿ ಹೊರಬರದಂತೆ ನೋಡಿಕೊಳ್ಳಿ. ಸಾರ್ವಜನಿಕರು ಯಾವುದೇ ಸಮಸ್ಯೆಯನ್ನು ಎದುರಿಸಬಾರದು ಎಂದು ಸಿಎಂ ಯೋಗಿ ಆದಿತ್ಯನಾಥ್ ಕಳೆದ ವಾರ ನಡೆದ ಕಾನೂನು ಮತ್ತು ಸುವ್ಯವಸ್ಥೆಯ ಪರಿಶೀಲನಾ ಸಭೆಯಲ್ಲಿ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಇದನ್ನೂ ಓದಿ: ಶಿವಗಿರಿ ತೀರ್ಥಯಾತ್ರೆಯ 90ನೇ ವಾರ್ಷಿಕೋತ್ಸವದ ಜಂಟಿ ಆಚರಣೆ: ಪ್ರಧಾನಿ ಮೋದಿ ಭಾಗಿ