ಲಾಹೌಲ್-ಸ್ಪಿತಿ: ಜಗತ್ತಿನ ಅತಿ ಎತ್ತರದ ಪ್ರದೇಶದಲ್ಲಿರುವ ಪೋಸ್ಟ್ ಆಫೀಸ್ ಹಿಮಾಚಲ ಪ್ರದೇಶದ ಸ್ಪಿತಿ ಜಿಲ್ಲೆಯ ಸ್ಪಿತಿ ಕಣಿವೆಯಲ್ಲಿದೆ. ಇಲ್ಲಿನ ಹಿಕ್ಕಿಮ್ ಗ್ರಾಮದಲ್ಲಿರುವ ಪೋಸ್ಟ್ ಆಫೀಸು ಸಮುದ್ರ ಮಟ್ಟದಿಂದ 14,567 ಅಡಿ ಎತ್ತರದಲ್ಲಿದ್ದು, ಜಗತ್ತಿನ ಅತಿ ಹೆಚ್ಚು ಎತ್ತರ ಪ್ರದೇಶದಲ್ಲಿರುವ ಪೋಸ್ಟ್ ಆಫೀಸ್ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಇತ್ತೀಚಿನವರೆಗೆ ಈ ಅಂಚೆ ಕಚೇರಿಗೆ ಸುಸಜ್ಜಿತವಾದ ಒಂದು ಕಟ್ಟಡ ಕೂಡ ಇರಲಿಲ್ಲ. ಆದರೆ, ಈಗ ಹೊಸ ಕಟ್ಟಡ ನಿರ್ಮಿಸಲಾಗಿದ್ದು, ಇದು ಪತ್ರ ಹಾಕುವ ಅಂಚೆ ಡಬ್ಬಿ ಅಥವಾ ಲೆಟರ್ ಬಾಕ್ಸ್ ಮಾದರಿಯಲ್ಲಿರುವುದು ವಿಶೇಷ. ಸದ್ಯ ಈ ಲೆಟರ್ ಬಾಕ್ಸ್ ಪೋಸ್ಟ್ ಆಫೀಸು ಪ್ರವಾಸಿಗರಿಗೆ ಬಹಳ ಅಚ್ಚುಮೆಚ್ಚಿನದ್ದಾಗಿದೆ. ಈ ಕಚೇರಿಯಲ್ಲಿ ಈವರೆಗೆ ಕೆಲಸ ಆರಂಭವಾಗದಿದ್ದರೂ ಇದನ್ನು ನೋಡಲು ಬರುವ ಪ್ರವಾಸಿಗರ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಹೊಸ ಲೆಟರ್ ಬಾಕ್ಸ್ ಕಟ್ಟಡವಲ್ಲದೆ ಹಳೆಯ ಮಾದರಿಯ ಮಣ್ಣಿನ ಚಿಕ್ಕ ಅಂಚೆ ಕಚೇರಿ ಕಟ್ಟಡವೂ ಇಲ್ಲಿದೆ. ಇದರ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುವುದು ಪ್ರವಾಸಿಗರಿಗೆ ಇಷ್ಟದ ಸಂಗತಿ. ತಾವು ಜಗತ್ತಿನ ಅತಿ ಎತ್ತರದ ಅಂಚೆ ಕಚೇರಿಯ ಮುಂದೆ ಇದ್ದೇವೆ ಎಂದು ಜನ ಹೆಮ್ಮೆಯಿಂದ ಬರೆದುಕೊಂಡು ಸೆಲ್ಫಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.
ಸ್ಪಿತಿ ಕಣಿವೆಯ ಸುಂದರ, ವರ್ಣರಂಜಿತ ಚಿತ್ರಗಳಿರುವ ಪೋಸ್ಟ್ ಕಾರ್ಡ್ಗಳನ್ನು ಪ್ರವಾಸಿಗರು ಈ ಅಂಚೆ ಕಚೇರಿಯಿಂದ ತಮ್ಮ ಬಂಧು-ಮಿತ್ರರಿಗೆ, ಪ್ರೀತಿ ಪಾತ್ರರಿಗೆ ಪೋಸ್ಟ್ ಮಾಡಬಹುದು ಎಂಬುದು ಮತ್ತೊಂದು ವಿಶೇಷತೆ. ವಿಶ್ವದ ಅತಿ ಎತ್ತರದ ಕಣಿವೆಯಿಂದ ಈ ಪೋಸ್ಟ್ ಕಾರ್ಡ್ ಬಂದಿದೆ ಎಂದು ಈ ಕಾರ್ಡ್ ಪಡೆಯವವರು ಕೂಡ ಖುಷ್ ಆಗುತ್ತಾರೆ.
ಹಿಕ್ಕಿಮ್ ಗ್ರಾಮದ ಸುತ್ತಮುತ್ತ ಪ್ರವಾಸೋದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಅಂಚೆ ಇಲಾಖೆಯು ಇದೇ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.