ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ ಅಕ್ಷರಧಾಮ ಮೆಟ್ರೋ ನಿಲ್ದಾಣದ ಕಟ್ಟಡದ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ಸಿಐಎಸ್ಎಫ್ ಸಿಬ್ಬಂದಿ ರಕ್ಷಿಸಿದರು ಸಹ ಆಕೆ ಬದಕುಳಿಯಲಿಲ್ಲ. ನಿನ್ನೆ ಬೆಳಗ್ಗೆ 7.30ರ ಸುಮಾರಿಗೆ ನಿಲ್ದಾಣದ ಪ್ಲಾಟ್‌ಫಾರಂ ನಂಬರ್ 2ರ ಕಟ್ಟಡದ ಮೇಲೇರಿ ಯುವತಿ ನಿಂತಿದ್ದನ್ನು ಗಮನಿಸಿದ ಕೆಲವರು ಸೆಕ್ಯೂರಿಟಿ ಫೋರ್ಸ್ಗೆ ಮಾಹಿತಿ ತಿಳಿಸಿದ್ದಾರೆ.
ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್‌ಎಫ್) ಸಿಬ್ಬಂದಿ ಈ ಮಾಹಿತಿಯನ್ನು ತಕ್ಷಣವೇ ಶಿಫ್ಟ್ ಇಂಚಾರ್ಜ್ಗೆ ರವಾನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅವರು ಮಹಿಳೆಯನ್ನು ಕೆಳಗೆ ಇಳಿಯುವಂತೆ ಮನವೊಲಿಸಲು ಯತ್ನಿಸಿದರು. ಆದರೂ ಸಹ ಆಕೆ ಅವರ ಮನವಿಗೆ ಕಿವಿಗೊಡಲಿಲ್ಲ.
ಶಿಫ್ಟ್ ಇನ್ಚಾರ್ಜ್ ತಕ್ಷಣವೇ ಸ್ಟೇಷನ್ ಕಂಟ್ರೋಲರ್, ಮೆಟ್ರೋ ಕಂಟ್ರೋಲ್, ಕ್ಲಸ್ಟರ್ ಇನ್ಸ್ಪೆಕ್ಟರ್ ಮತ್ತು ಲೈನ್ ಇನ್ಚಾರ್ಜ್ಗೆ ಮಾಹಿತಿ ನೀಡಿದರು. ಅವರೆಲ್ಲರೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದರು. ಸಮೀಪದ ಮಾಲ್‌ನ ನಾಲ್ವರು ಸಿಬ್ಬಂದಿಯೊಂದಿಗೆ ಶಿಫ್ಟ್ ಇನ್ಚಾರ್ಜ್ ಆಕೆಯನ್ನು ಗಟ್ಟಿಯಾದ ಹೊದಿಕೆ ವ್ಯವಸ್ಥೆ ಮಾಡಿದ್ದರು.
ಓದಿ: ಸಂಚರಿಸುತ್ತಿದ್ದ ರೈಲಿನ ಎದುರಿಗೆ ಹಾರಿ ಆತ್ಮಹತ್ಯೆ : ವಿಡಿಯೋ ಭಯಾನಕ
ಸಾಧ್ಯವಿರುವ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಮತ್ತು ಆತ್ಮಹತ್ಯೆ ಮಾಡಿಕೊಳ್ಳಬೇಡ ಎಂದು ಎಷ್ಟೇ ಬುದ್ಧಿ ಮಾತು ಹೇಳಿದ್ರೂ ಸಹ ಆ ಯುವತಿ ಮೇಲಿಂದ ಕೆಳಗೆ ಜಿಗಿದಿದ್ದಾಳೆ. ಸುಮಾರು 40 ಅಡಿ ಎತ್ತರದಿಂದ ಜಿಗಿದ ಯುವತಿಯನ್ನು ಸಿಐಎಸ್ಎಫ್ ತಂಡ ರಕ್ಷಿಸಿತು. ಈ ಘಟನೆಯಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಸಿಐಎಸ್ಎಫ್ ವಕ್ತಾರರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ಪಂಜಾಬ್ ಮೂಲದವರು ಎಂದು ಗುರುತಿಸಲಾಗಿದೆ. ಆಕೆಗೆ 20 ರಿಂದ 22 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಘಟನೆಯ ವಿಡಿಯೋವನ್ನು ಸಿಐಎಸ್‌ಎಫ್ ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ಇನ್ನು ಸಿಐಎಸ್ಎಫ್ ತಂಡ ಎಷ್ಟೇ ಕಷ್ಟಪಟ್ಟರೂ ಯುವತಿಯ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ರಾತ್ರಿ ವೇಳೆ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.