ಕೌಶಾಂಬಿ (ಉತ್ತರ ಪ್ರದೇಶ): ದರೋಡೆ ಪ್ರಕರಣಗಳು ಮತ್ತು ಅದನ್ನು ತಪ್ಪಿಸಲು ಸಂತ್ರಸ್ತರ ಪ್ರಯತ್ನಗಳ ಬಗ್ಗೆ ಅನೇಕ ಸುದ್ದಿಗಳನ್ನು ನೀವು ಕೇಳಿರಬಹುದು. ಆದರೆ ಇಲ್ಲೊಂದು ಪ್ರಕರಣದಲ್ಲಿ ಮಹಿಳೆ ದರೋಡೆಕೋರದಿಂದ ರಕ್ಷಿಸಿಕೊಳ್ಳಲು ಆತನ ಬೆರಳುಗಳಿಗೆ ಕಚ್ಚಿ ಕತ್ತರಿಸಿದ್ದಾಳೆ. ಉತ್ತರ ಪ್ರದೇಶದ ಕೌಶಾಂಬಿಯಲ್ಲಿ ಶುಕ್ರವಾರ (ಫೆ.3) ಈ ಘಟನೆ ನಡೆದಿದೆ.
ಪ್ರಕರಣದ ವಿವರ: ಮಯೋಹರ್ ಗ್ರಾಮದ ನಿವಾಸಿ ಶ್ರೀಚಂದ್ ರೈದಾಸ್ ಎಂಬುವವರ ಪತ್ನಿ ನೀತಾ ದೇವಿ ಅವರು ಶುಕ್ರವಾರ ಸಂಜೆ ಮಾರುಕಟ್ಟೆಯಿಂದ ತರಕಾರಿ ತೆಗೆದುಕೊಂಡು ಕಾಲ್ನಡಿಗೆಯಲ್ಲಿ ತಮ್ಮ ಗ್ರಾಮಕ್ಕೆ ಮರಳುತ್ತಿದ್ದರು. ನಿರ್ಜನ ಪ್ರದೇಶಕ್ಕೆ ಬಂದ ಕೂಡಲೇ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿ ಆಕೆಯ ಮೈಮೇಲಿನ ಚಿನ್ನಾಭರಣ ದೋಚಲು ಯತ್ನಿಸಿದ್ದಾನೆ. ಮಹಿಳೆ ಜೋರಾಗಿ ಕೂಗಲು ಯತ್ನಿಸಿದಾಗ ಆರೋಪಿ ಆಕೆಯ ಬಾಯಿ ಮುಚ್ಚಿದ್ದಾನೆ. ಆಗ ಆರೋಪಿಯ ಬೆರಳು ಮಹಿಳೆಯ ಬಾಯಿಗೆ ಸಿಕ್ಕಿಕೊಂಡಿತು. ಧೈರ್ಯ ತೋರಿದ ಮಹಿಳೆ ಹಲ್ಲುಗಳಿಂದ ಬೆರಳನ್ನು ಕಚ್ಚಿ ತುಂಡರಿಸಿದ್ದಾಳೆ.
ಇದನ್ನೂ ಓದಿ: ಕರ್ನಾಟಕಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಬಂದ ವ್ಯಕ್ತಿ: ಉಗ್ರ ಎಂಬ ಶಂಕೆ ಮೇಲೆ ಅಮೃತಸರದಲ್ಲಿ ಬಂಧಿ!
ಇದರಿಂದ ಹೆದರಿದ ಆರೋಪಿ ಗ್ರಾಮಸ್ಥರು ಆಕೆಯ ರಕ್ಷಣೆಗೆ ಬರುವ ಮುನ್ನವೇ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿಯ ಬೆರಳು ಮಾತ್ರ ಮಹಿಳೆಯ ಬಾಯಲ್ಲೇ ಉಳಿದಿತ್ತು. ಬಳಿಕ ಶನಿವಾರ ಮಹಿಳೆ ಕತ್ತರಿಸಿದ ಬೆರಳಿನೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದಾಳೆ. ಮಹಿಳೆಯ ಕೈಯಲ್ಲಿ ಕತ್ತರಿಸಿದ ಬೆರಳನ್ನು ನೋಡಿದ ಪೊಲೀಸ್ ಸಿಬ್ಬಂದಿ ಶಾಕ್ ಆಗಿದ್ದಾರೆ. ನಂತರ ಪೊಲೀಸ್ ಸಿಬ್ಬಂದಿ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದಾಗ ಘಟನೆಯನ್ನು ಪೊಲೀಸರಿಗೆ ವಿವರಿಸಿದ್ದಾಳೆ. ವಿಷಯ ತಿಳಿದು ಸಿಬ್ಬಂದಿ ಮಹಿಳೆಯ ಧೈರ್ಯವನ್ನು ಕೊಂಡಾಡಿದ್ದಾರೆ. ಆರೋಪಿ ಹಲ್ಲೆ ಮಾಡಿದ್ದು, ಮುಖದ ಮೇಲೆ ಗಾಯವಾಗಿದೆ. ನಮ್ಮ ಬಳಿಯಿದ್ದ ಚಿನ್ನದ ಸರ, ಬೆಳ್ಳಿಯ ಕಾಲುಂಗುರ ಮತ್ತು 4,000 ರೂ.ನಗದನ್ನು ದರೋಡೆ ಪರಾರಿಯಾಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದರೋಡೆಕೋರರಿಗಾಗಿ ಶೋಧ: "ಅಪರಿಚಿತ ವ್ಯಕ್ತಿ ದರೋಡೆ ಮಾಡಿದ್ದು, ಈ ವೇಳೆ ಆತನ ಬೆರಳನ್ನು ತುಂಡರಿಸಿದ್ದಾಗಿ ಮಹಿಳೆಯೊಬ್ಬರು ಕರಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ" ಎಂದು ಪೊಲೀಸ್ ಅಧಿಕಾರಿ ಯೋಗೇಂದ್ರ ಕೃಷ್ಣ ನಾರಾಯಣ್ ತಿಳಿಸಿದ್ದಾರೆ.
ಮ್ಯಾನೇಜರ್ಗೆ ಹೆದರಿ ಪರಾರಿ: ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ವೊಬ್ಬರು ಆಯುಧದಾರಿ ದರೋಡೆಕೋರನ ವಿರುದ್ಧ ಧೈರ್ಯದಿಂದ ಹೋರಾಡಿ ಸಾಹಸ ಮೆರೆದಿದ್ದ ಪ್ರಕರಣ ಇತ್ತೀಚೆಗೆ ವರದಿಯಾಗಿತ್ತು. ಆರ್‌ಎಂಜಿಬಿ ಗ್ರಾಮೀಣ ಬ್ಯಾಂಕ್‌ಗೆ ಚಾಕು ಹಿಡಿದು ಪ್ರವೇಶಿಸಿದ ಕಿಡಿಗೇಡಿಯೊಬ್ಬ ಅಲ್ಲಿದ್ದ ಸಿಬ್ಬಂದಿಯನ್ನು ಹೆದರಿಸಲು ಪ್ರಯತ್ನಿಸಿದ್ದಾನೆ. ಗುರುತು ಸಿಗದಂತೆ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದ ಆತ, ಎಲ್ಲ ಕಡೆಯೂ ಚಾಕು ಹಿಡಿದು ಓಡಾಡಿದ್ದಾನೆ. ಈ ವೇಳೆ ಬ್ಯಾಂಕ್ ಮ್ಯಾನೇಜರ್ ಪೂನಂ ಗುಪ್ತಾ ಅವರು, ತನ್ನ ಕೈಯಲ್ಲಿ ಇಕ್ಕಳ ಹಿಡಿದು, ದರೋಡೆಕೋರನನ್ನು ಎದುರಿಸಿದ್ದರು. ಕೆಲವು ನಿಮಿಷಗಳ ಕಾಲ ಪ್ರಯತ್ನಿಸಿದ ಖದೀಮ, ತನ್ನ ಯೋಜನೆ ವಿಫಲವಾಗುವುದು ಅರಿವಾಗುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದ.
ಇದನ್ನೂ ಓದಿ: ಚಾಕು ಹಿಡಿದು ದರೋಡೆಗೆ ಬಂದ ಕಿರಾತಕ.. ವೀರನಾರಿ ಮ್ಯಾನೇಜರ್ಗೆ ಹೆದರಿ ಕಳ್ಳ ಪರಾರಿ- ವಿಡಿಯೋ